ರೈತರಿಗೆ ವೆಂಕಯ್ಯ ನಾಯ್ಡುರಿಂದ ಅಗೌರವ: ಸೀತಾರಾಂ ಯೆಚೂರಿ

ಹೊಸದಿಲ್ಲಿ, ಜೂ.22: ಸಾಲಮನ್ನಾಕ್ಕೆ ಬೇಡಿಕೆ ಇಡುತ್ತಿರುವ ರೈತರ ಬಗ್ಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ನೀಡಿರುವ ಹೇಳಿಕೆಗೆ ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೌರವಾನ್ವಿತ ಸಚಿವರು ದುರದೃಷ್ಟಕರ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ರೈತರಿಗೆ ಮಾಡಿರುವ ಅಗೌರವ. ಸಾಲ ಮನ್ನಾ ಎನ್ನುವುದು ಒಂದು ಫ್ಯಾಶನ್ ಆಗಿದೆ ಎಂದು ಅವರು ಇಂದು ಹೇಳಿಕೆ ನೀಡಿದ್ದಾರೆ. ನಾಳೆಯ ದಿನ ರೈತರ ಆತ್ಮಹತ್ಯೆ ಕೂಡ ಫ್ಯಾಶನ್ ಎಂದು ಹೇಳಬಹುದು. ಸಾಲದ ಹೊರೆ ತಾಳಲಾರದೇ ರೈತರು ಏಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ? ಕೇಂದ್ರ ಸರಕಾರ ಮೂರು ವರ್ಷಗಳ ಹಿಂದೆ ಘೋಷಿಸಿದಂತೆ ಉತ್ಪನ ವೆಚ್ಚಗಿಂತ 1 ಪಟ್ಟು ಹೆಚ್ಚು ಕನಿಷ್ಠ ಬೆಂಬಲ ಬೆಲೆ ನೀಡುವ ಭರವಸೆಯನ್ನು ಈತನಕ ಈಡೇರಿಸದೇ ಇರುವುದು ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ ಎಂದರು.
ಸಾಲ ಮನ್ನಾ ಎನ್ನುವುದು ಇದೀಗ ಫ್ಯಾಶನ್ ಆಗಿದೆ. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಮಾತ್ರ ಸಾಲ ಮನ್ನಾ ಮಾಡಬಹುದು. ಸಾಲ ಮನ್ನಾವೇ ಅಂತಿಮ ಪರಿಹಾರವಲ್ಲ. ನಾವು ನಮ್ಮ ವ್ಯವಸ್ಥೆಯ ಬಗ್ಗೆ ನಿಗಾ ಇಡಬೇಕಾಗುತ್ತದೆ. ರೈತರು ತಮ್ಮ ಕಷ್ಟವನ್ನು ಸಹಿಸಿಕೊಳ್ಳಬೇಕು ಎಂದು ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಾಯ್ಡು ಹೇಳಿದ್ದರು.





