4 ತಂಡಗಳಿಂದ ತನಿಖೆ: ಷಡ್ಯಂತ್ರ ರೂಪಿಸಿದವರನ್ನೂ ಬಂಧನ; ಎಡಿಜಿಪಿ ಅಲೋಕ್ ಮೋಹನ್
ಬಂಟ್ವಾಳದ ಅಹಿತಕರ ಘಟನೆಗಳು

ಮಂಗಳೂರು, ಜೂ. 22: ಬಂಟ್ವಾಳದ ಕಲ್ಲಡ್ಕ ಮತ್ತು ಸುತ್ತಮುತ್ತ ಕೆಲ ದಿನಗಳಿಂದೀಚೆಗೆ ನಡೆದಿರುವ ಅಹಿತಕರ ಘಟನೆಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಜತೆಗೆ ಈ ಷಡ್ಯಂತ್ರದಾರರನ್ನೂ ಬಂಧಿಸುವ ಮೂಲಕ ದುಷ್ಟ ಶಕ್ತಿಗಳಿಗೆ ಉತ್ತರ ನೀಡಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಮೋಹನ್ ಹೇಳಿದ್ದಾರೆ.
ಇಂದು ಬೆಳಗ್ಗೆ ನಗರಕ್ಕೆ ಭೇಟಿ ನೀಡಿರುವ ಅವರು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕಳೆದ ಕೆಲ ಸಮಯದಿಂದ ಶಾಂತಿ ಸುವ್ಯವಸ್ಥೆಯಿಂದ ಕೂಡಿದ್ದ ದ.ಕ. ಜಿಲ್ಲೆಯಲ್ಲಿ ಇಂತಹ ಘಟನೆ ಆಗಬಾರದಿತ್ತು. ಪೊಲೀಸ್ ಇಲಾಖೆಗೂ ಈ ಘಟನೆಗಳು ಆತಂಕವನ್ನು ನೀಡಿದೆ. ಐಜಿಪಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಬಂಟ್ವಾಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವ ಜತೆಗೆ ಜಿಲ್ಲೆಯಲ್ಲಿ ಅಹಿತಕರ ಘಟನೆಗಳ ಷಡ್ಯಂತ ರೂಪಿಸಿರುವವರನ್ನು ಬಂಧಿಸುವ ನಿಟ್ಟಿನಲ್ಲಿ ನಾಲ್ಕು ತಂಡಗಳಲ್ಲಿ ಮಂಗಳೂರು ಪೊಲೀಸ್ ಮತ್ತು ದ.ಕ. ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.
ಪ್ರತಿಯೊಂದು ಘಟನೆಗಳನ್ನು ಪೊಲೀಸ್ ತಂಡಗಳು ಪ್ರತ್ಯೇಕ ನಿಗಾದೊಂದಿಗೆ ತನಿಖೆ ನಡೆಸುತ್ತಿವೆ. ಆರೋಪಿಗಳನ್ನು ಬಂಧಿಸಿದಾಕ್ಷಣ ಈ ಘಟನೆಗಳ ಷಡ್ಯಂತ್ರ ರೂಪಿಸಿದವರನ್ನೂ ಬಂಧಿಸಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲಿ ನಡೆದಿರುವ ಘಟನೆಗಳು ಉತ್ತಮ ಬೆಳವಣಿಗೆಯಲ್ಲ. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲಿದ್ದು, ದುಷ್ಟ ಹಾಗೂ ರೌಡಿ ಶಕ್ತಿಗಳನ್ನು ಬಗ್ಗುಬಡಿಯಲಿದೆ. ಇಲಾಖೆ ತನ್ನೆಲ್ಲಾ ಶ್ರಮದೊಂದಿಗೆ ಈ ಪ್ರಕರಣಗಳನ್ನು ತನಿಖೆ ನಡೆಸಲಿದೆ ಎಂದು ಅವರು ಹೇಳಿದರು.
ಮಂಗಳೂರು ಮತ್ತು ದ.ಕ. ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಉತ್ತಮವಾಗಿದೆ. ದಕ್ಷ ಹಾಗೂ ಕರ್ತವ್ಯನಿಷ್ಟ ಪೊಲೀಸ್ ಅಧಿಕಾರಿಗಳು ಇಲ್ಲಿದ್ದಾರೆ. ಹಾಗಿದ್ದರೂ ಇತ್ತೀಚಿನ ಘಟನೆ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವತ್ತ ಚಿಂತನೆ ನಡೆದಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ಹೇಳಿದರು. ಈ ಸಂದರ್ಭ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಉಪಸ್ಥಿತರಿದ್ದರು.
ಅಧಿಕಾರಿಗಳ ವರ್ಗಾವಣೆ ಸರಕಾರದ ನಿರ್ಧಾರ:
ದ.ಕ. ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಲೋಕ್ ಮೋಹನ್, ಅದು ಸರಕಾರದ ನಿರ್ಧಾರ. ಜಿಲ್ಲೆಯಲ್ಲಿ ತಲೆ ಎತ್ತಿರುವ ದುಷ್ಕರ್ಮಿಗಳನ್ನು ಹತ್ತಿಕ್ಕಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸರಕಾರ ತನ್ನ ನೆಲೆಯಲ್ಲಿ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಕಲ್ಲಡ್ಕ ಘಟನೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿಯವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆಯೇ ಎಂಬ ಪ್ರಶ್ನೆಗೆ, ಹೌದು ಎಂದು ಪ್ರತಿಕ್ರಿಯಿಸಿದರು.
ಹೆಚ್ಚುವರಿ ಪೊಲೀಸರ ನಿಯೋಜನೆ
ಈಗಾಗಲೇ ಬಂಟ್ವಾಳದಲ್ಲಿ ಮಂಗಳೂರು ಪೊಲೀಸ್ ಆಯುಕ್ತಾಲಯ ಹಾಗೂ ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪೊಲೀಸರ ನಿಯೋಜನೆಯಲ್ಲದೆ, ಉಡುಪಿ, ಚಿಕ್ಕಮಗಳೂರು ಕಾರವಾದಿಂದಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸೆಕ್ಷನ್‌ನಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಬಾಧಕವಾಗದು:
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಈಗಾಗಲೇ ಜಾರಿಗೊಳಿಸಲಾಗಿರುವ ಸೆಕ್ಷನ್ 144ನ್ನು ಇಂದು ಬೆಳಗ್ಗೆಯಿಂದ ಜೂನ್ 27ರವರೆಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೂ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಐದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಗುಂಪುಗೂಡುವಂತಿಲ್ಲ. ಆದರೆ ಈ ಸೆಕ್ಷನ್ 144 ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಎಡಿಜಿಪಿ ಅಲೋಕ್ ಮೋಹನ್ ಸ್ಪಷ್ಟಪಡಿಸಿದರು.







