ಕಾಶ್ಮೀರ: ಮೂವರು ಲಷ್ಕರ್ ಉಗ್ರರ ಹತ್ಯೆ

ಶ್ರೀನಗರ,ಜೂ.22: ಸರಣಿ ಹತ್ಯೆಗಳಲ್ಲಿ ಭಾಗಿಯಾಗಿದ್ದ ಓರ್ವ ಬಂಡುಕೋರ ಸೇರಿದಂತೆ ಮೂವರು ಉಗ್ರರು ಗುರುವಾರ ಬೆಳಗಿನ ಜಾವ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗಿನ ಆರು ಗಂಟೆಗಳ ಸುದೀರ್ಘ ಗುಂಡಿನ ಕಾಳಗದಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಈ ಸಂದರ್ಭ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ವೇಳೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ಹತ ಉಗ್ರರ ಪೈಕಿ ಮಜೀದ್ ದಾರ್ ಎಂಬಾತ ಕಾಕಪೋರಾ ಸರಪಂಚ ಮತ್ತು ಪುಲ್ವಾಮಾ ಜಿಲ್ಲಾಧ್ಯಕ್ಷರ ಹತ್ಯೆ ಸೇರಿದಂತೆ ಹಲವಾರು ಹತ್ಯೆ ಪ್ರಕರಣಗಳಲ್ಲಿ ಭಾಗಿ ಯಾಗಿದ್ದ ಎಂದು ಪೊಲೀಸ್ ಅಧಿಕಾರಿಯೋರ್ವರು ಇಲ್ಲಿ ತಿಳಿಸಿದರು.
ನಿಷೇಧಿತ ಲಷ್ಕರ್-ಎ-ತೈಬಾ ಭಯೋತ್ಪಾದಕ ಗುಂಪಿಗೆ ಸೇರಿದ ಮೂವರು ಸ್ಥಳೀಯ ಯುವಕರು ಪುಲ್ವಾಮಾದ ಕಾಕಪೋರಾದಲ್ಲಿನ ಜನನಿಬಿಡ ಪ್ರದೇಶದ ಮನೆಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದಾರೆಂಬ ಮಾಹಿತಿ ಪಡೆದಿದ್ದ ಭದ್ರತಾ ಪಡೆಗಳು ಬುಧವಾರ ತಡಸಂಜೆ ಆ ಮನೆಯನ್ನು ಸುತ್ತುವರಿದಿದ್ದರು. ಈ ವೇಳೆ ಉಗ್ರರು ಗುಂಡು ಹಾರಿಸಿದ್ದು, ಭದ್ರತಾ ಪಡೆಗಳು ಪ್ರತಿದಾಳಿಯನ್ನು ನಡೆಸಿದ್ದವು. ಗುಂಡಿನ ಕಾಳಗವು ಸುದೀರ್ಘ ಆರು ಗಂಟೆಗಳ ಕಾಲ ನಡೆದಿದ್ದು, ಉಗ್ರರ ಹತ್ಯೆಯೊಂದಿಗೆ ಕೊನೆಗೊಂಡಿತು.
ಇದು ಸ್ಥಳೀಯ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆನ್ನಲಾಗಿರುವ ಪುಲ್ವಾಮಾದಲ್ಲಿ ನಡೆದಿರುವ ಮೊದಲ ಯಶಸ್ವಿ ಬಂಡಾಯ ನಿಗ್ರಹ ಕಾರ್ಯಾಚರಣೆಯಾಗಿದೆ.







