ಜಿಲ್ಲೆಯ ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಿ: ಜಿಪಂ ಸಭೆಯಲ್ಲಿ ಸದಸ್ಯರ ಒಕ್ಕೊರಳ ಆಗ್ರಹ

ಉಡುಪಿ, ಜೂ. 22: ಕಳೆದ ಸುಮಾರು ಒಂದೂವರೆ ವರ್ಷದಿಂದ ಜಿಲ್ಲೆಯ ಜನರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿ ರುವ ಮರಳು ಸಮಸ್ಯೆಗಳಿಗೆ ಈ ಬಾರಿ ಮಳೆಗಾಲ ಮುಗಿಯುವುದರೊಳಗೆ ಶಾಶ್ವತ ಪರಿಹಾರವೊಂದನ್ನು ರೂಪಿಸುವಂತೆ ಉಡುಪಿ ಜಿಪಂನ ಏಳನೇ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ರಾಜ್ಯಕ್ಕೊಂದು ಮರಳು ನೀತಿ ಇದೆ. ಆದರೆ ಕರಾವಳಿ ಜಿಲ್ಲೆಯಲ್ಲಿ ಪರಿಸ್ಥಿತಿಯೇ ಉಳಿದೆಲ್ಲಾ ಜಿಲ್ಲೆಗಳಿಂದ ಬೇರೆ ಆಗಿರುವು ದರಿಂದ ಇಲ್ಲಿಗೆ ಪ್ರತ್ಯೇಕವಾದ ಮರಳು ನೀತಿ ಬೇಕೆಂಬುದು ಈ ಮೂರು ಜಿಲ್ಲೆಗಳ ಶಾಸಕರ ಆಗ್ರಹ. ಇದಕ್ಕಾಗಿ ನಾವು ಬೆಂಗಳೂರಿನಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಪ್ರಯತ್ನ ನಡೆಸಬೇಕಾಗಿದೆ. ಮುಖ್ಯಮಂತ್ರಿಗಳು, ಕಾನೂನು ಸಚಿವರು ಇದಕ್ಕೆ ಒಪ್ಪಿದ್ದಾರೆ. ಸಿಇಒ, ಜಿಲ್ಲಾಧಿಕಾರಿಗಳು ಬಂದು ಮುಖ್ಯ ಕಾರ್ಯದರ್ಶಿಗಳು, ಇಲಾಖಾ ಕಾರ್ಯದರ್ಶಿಗಳಿಗೆ ವಿಷಯ ಮನವರಿಕೆ ಮಾಡಬೇಕು ಎಂದರು.
ರಾಜ್ಯದ ನೀತಿಯನ್ನು ಜಾರಿಗೊಳಿಸಿದರೆ ನಮಗೆ ಸಮಸ್ಯೆಯಾಗುತ್ತದೆ. ಆದುದರಿಂದ ಸಿಇಒ ಬೆಂಗಳೂರಿಗೆ ಬರುವುದಾದರೆ ನಾನು ಸಚಿವರಾದ ಜಯಚಂದ್ರ, ವಿನಯ ಕುಲಕರ್ಣಿರೊಂದಿಗೆ ಮಾತನಾಡಿ ಅಧಿಕಾರಿಗಳೊಂದಿಗೆ ಸಭೆಗೆ ವ್ಯವಸ್ಥೆ ಮಾಡುತ್ತೇನೆ. ನಾವು ಶೀಘ್ರವೇ ಈ ಸಮಸ್ಯೆಗೆ ಪರಿಹಾರ ಹುಡುಕದಿದ್ದರೆ, ಮುಂದಿನ ಋತುವಿನಲ್ಲೂ ಮರಳು ಸಮಸ್ಯೆ ಉಳಿದು ಬಿಡುತ್ತದೆ ಎಂದರು.
ಸಿಇಒ ಮಾತನಾಡಿ, ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಈಗ ಯಾವುದೇ ಸಮಸ್ಯೆ ಇಲ್ಲ. ಮಳೆಗಾಲ ಮುಗಿದ ಬಳಿಕ ಅದನ್ನು ನಡೆಸಬಹುದು. ಇದಕ್ಕೆ ಸರಕಾರದ ಅನುಮತಿಯಷ್ಟೇ ಬೇಕಾಗಿದೆ. ಆದರೆ ನಾನ್‌ಸಿಆರ್‌ಝಡ್ ವ್ಯಾಪ್ತಿಯ ಐದು ಬ್ಲಾಕ್‌ಗಳಿಗೆ ಹೈಕೋರ್ಟ್‌ನಲ್ಲಿ ತಡೆಯಿದೆ. ಅದು ಈಗ ಸಮಸ್ಯೆಯಾಗಿದೆ ಎಂದರು.
ಕರಾವಳಿಗೆ ಪ್ರತ್ಯೇಕ ನೀತಿಯೊ, ಇನ್ನೊಂದೊ ಜಿಲ್ಲೆಯ ಜನಸಾಮಾನ್ಯರಿಗೆ ಸುಲಭವಾಗಿ, ಕಡಿಮೆ ದರದಲ್ಲಿ ಮರಳು ಸಿಗಬೇಕು. ಅದಕ್ಕೆ ಬೇಕಾದ ಕ್ರಮ ಕೈಗೊಳ್ಳಿ. ಈ ಬಾರಿಯೂ ಜನರನ್ನು ಮರಳು ವಿಷಯದಲ್ಲಿ ಕಾಡಿಸಬೇಡಿ ಎಂದು ಕೆ.ಬಾಬು ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ ಹಾಗೂ ಇತರರು ಆಗ್ರಹಿಸಿದರು.
ವಸತಿ ಯೋಜನೆಗೆ ಸಮಸ್ಯೆ:
ಬಸವ ವಸತಿ ಯೋಜನೆಯ ಅನುಷ್ಠಾನದಲ್ಲಿ ಆಗಾಗ ಆಗುತ್ತಿರುವ ಬದಲಾವಣೆಗಳಿಂದ ವಸತಿ ಯೋಜನೆ ಫಲಾನುಭವಿ ಗಳಿಗೆ ತೊಂದರೆಯಾಗಿದೆ ಎಂದು ಜನಾರ್ಧನ ತೋನ್ಸೆ ದೂರಿದರು. ಬಡಾನಿಡಿಯೂರಿನಲ್ಲಿ ಮೂವರು ಫಲಾನುಭವಿಗಳು ಜಿಪಿಎಸ್ ಮಾಡಿ ಬಿಲ್ಲನ್ನು ನೀಡಿದರೂ ಇನ್ನೂ ಸಹ ಹಣ ಬಿಡುಗಡೆಯಾಗಿಲ್ಲ. ಈಗ ಮಳೆಗಾಲದಲ್ಲಿ ಅವರು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಇದೇ ಸಮಸ್ಯೆ ಜಿಲ್ಲೆಯಾದ್ಯಂತ ಇದೆ ಎಂದು ಅಧ್ಯಕ್ಷರು ಸೇರಿ ಉಳಿದ ಸದಸ್ಯರು ಸಭೆ ಯ ಗಮನ ಸೆಳೆದರು. ಈಗಿರುವ 1.5 ಮತ್ತು 1.6 ವರ್ಷನ್‌ನಡಿ ಜಿಪಿಎಸ್ ಮೂಲಕ ದಾಖಲಿಸಲು ವಸತಿ ನಿಗಮದಿಂದ ಸೂಚನೆ ಬಂದಿದೆ ಎಂದು ಅಧಿಕಾರಿಗಳು ಉತ್ತರಿಸಿದರು.
ಕಿಂಡಿ ಅಣೆಕಟ್ಟು ನಿರ್ವಹಣೆ:
ಜಿಲ್ಲೆಯಲ್ಲಿರುವ ಕಿಂಡಿ ಅಣೆಕಟ್ಟಿನ ಕಳಪೆ ಕಾಮಗಾರಿ, ನಿರ್ವಹಣೆಯ ಕೊರತೆ ಕುರಿತು ಇಂದು ಮತ್ತಷ್ಟು ಬಿರುಸಿನ ಚರ್ಚೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಜನಾರ್ದನ ತೋನ್ಸೆ ಮತ್ತು ಮೈರ್ಮಾಡಿ ಸುಧಾಕರ ಶೆಟ್ಟಿ ಅವರು, ಕೇವಲ ಒಂದು ವರ್ಷದ ಹಿಂದೆ ಕಾರ್ಯಾರಂಭಿಸಿದ 1.75 ಕೋಟಿ ರೂ. ವೆಚ್ಚದ ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯ ವೆಂಟೆಡ್‌ಡ್ಯಾಮ್ ಕಳಪೆ ಕಾಮಗಾರಿಯಿಂದ ನಿರುಪಯುಕ್ತವಾಗಿದೆ. ಇದಕ್ಕೆ ಈಗ ತೇಪೆ ಹಚ್ಚಿ ದುರಸ್ತಿ ಮಾಡಲಾಗಿದೆ. ಇಷ್ಟೊಂದು ಹಣ ವ್ಯರ್ಥವಾಗಿರುವುದರಿಂದ ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಕೇಳಿದರು.
ಈ ಹಂತದಲ್ಲಿ ಕಳಪೆ ಕಾಮಗಾರಿಗೆ ಯಾರನ್ನು ಜವಾಬ್ದಾರರನ್ನಾಗಿ ಮಾಡಬೇಕು- ಗುತ್ತಿಗೆದಾರರನ್ನೊ ಇಲ್ಲ ಇಂಜಿನಿಯರ್‌ರನ್ನೊ- ಎಂಬ ಬಗ್ಗೆ ಸದಸ್ಯರಲ್ಲಿ ಚರ್ಚೆ ನಡೆಯಿತು. ಚರ್ಚೆಯ ಕೊನೆಗೆ ಕಿಂಡಿ ಅಣೆಕಟ್ಟು ಕಾಮಗಾರಿ ಬಗ್ಗೆ ಸಮಿತಿಯೊಂದರ ಮೂಲಕ ಸಮಗ್ರ ತನಿಖೆಗೆ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಆದೇಶಿಸಿದರು. ಅದೇ ರೀತಿ ಕಿಂಡಿ ಅಣೆಕಟ್ಟಿನ ನಿರ್ವಹಣೆಯನ್ನು ಗ್ರಾಪಂಗೆ ನೀಡಿ ಅದಕ್ಕೆ ಅನುದಾನವನ್ನು ಬಿಡುಗಡೆಗೊಳಿಸುವಂತೆ ಪ್ರತಾಪ್ ಚಂದ್ರ ಶೆಟ್ಟಿ, ಬಾಬು ಶೆಟ್ಟಿ, ಜನಾರ್ದನ ತೋನ್ಸೆ ಸಲಹೆ ನೀಡಿದರು.
ವಾರಾಹಿ ಯೋಜನೆಯಡಿ ಸಂತ್ರಸ್ತರಾದವರಿಗೆ ಪರಿಹಾರ ನೀಡುವ ಬಗ್ಗೆಯೂ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಇದರ ಬಗ್ಗೆ ನಿರ್ಲಕ್ಷ ಸಲ್ಲದು ಎಂದರು. ವಾರಾಹಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಎಂದು ಪ್ರತಾಪ್‌ಚಂದ್ರ ಶೆಟ್ಟಿ ಆಗ್ರಹಿಸಿದರು.
ಕುಂದಾಪುರ ಆಸ್ಪತ್ರೆ ವೈದ್ಯರಿಗೆ ತರಾಟೆ
ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ವಿಷದ ಹಾವು ಕಚ್ಚಿ ಚಿಕಿತ್ಸೆಗೆಂದು ಬಂದ ಬೈಂದೂರಿನ ಮಹಿಳೆ ಸಕಾಲದಲ್ಲಿ ಸಿಗದ ಚಿಕಿತ್ಸೆಯಿಂದ ಸಾವನ್ನಪ್ಪಿದ ಘಟನೆ ಹಾಗೂ ಹೆರಿಗೆಗಾಗಿ ಬಂದ ಬಡ ಮಹಿಳೆಯೊಬ್ಬರನ್ನು ಮಧ್ಯರಾತ್ರಿ ಅಂಬುಲೆನ್ಸ್ ನೀಡದೇ ಹೊರಗಟ್ಟಿದ ಪ್ರಕರಣದ ಕುರಿತು ಜಿಪಂ ಸದಸ್ಯರು ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಆಸ್ಪತ್ರೆಯಲ್ಲಿ ವೈದ್ಯರಾದಿಯಾಗಿ, ನರ್ಸ್ ಹಾಗೂ ಸಿಬ್ಬಂದಿಗಳು ದುರಂಹಕಾರಿಗಳಾಗಿ ವರ್ತಿಸುತ್ತಾರೆ. ಸೌಜನ್ಯ, ಮಾನವೀಯತೆ ಎಂಬುದು ಇಲ್ಲಿನ ಸಿಬ್ಬಂದಿಗಳಲ್ಲಿ ಇಲ್ಲವೇ ಇಲ್ಲ. ಇಲ್ಲಿ ಇಷ್ಟೊಂದು ಗಂಭೀರ ಪ್ರಕರಣ ಗಳಾದರೂ ಯಾರ ವಿರುದ್ಧವೂ ಶಿಸ್ತುಕ್ರಮ ಕೈಗೊಂಡಿಲ್ಲ ಎಂದು ಶಾಸಕ ಗೋಪಾಲ ಪೂಜಾರಿ ಡಿಎಚ್‌ಓ ಡಾ.ರೋಹಿಣಿ ವಿರುದ್ಧ ಕೆಂಡ ಕಾರಿದರು.
ಆ ಆಸ್ಪತ್ರೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇಲ್ಲಿ ಬಡ ರೋಗಿಗಳ ಬಗ್ಗೆ ಯಾರೂ ಮುತುವರ್ಜಿ ವಹಿಸುತ್ತಿಲ್ಲ. ಬೇಜವಾಬ್ದಾರಿಯಾಗಿ ವರ್ತಿಸುತ್ತಾರೆ. ಹಿಂದಿನ ಆರೋಗ್ಯ ಸಚಿವ ಯು.ಟಿ.ಖಾದರ್ ಆಸ್ಪತ್ರೆಗೆ ಭೇಟಿ ನೀಡಿದಾಗ, ರೋಗಿಯೊಬ್ಬ ಸತ್ತಿರುವುದು ವೈದ್ಯರ ಗಮನಕ್ಕೆ ಬಂದಿರಲಿಲ್ಲ ಎಂದು ಪ್ರತಾಪ್‌ಚಂದ್ರ ಶೆಟ್ಟಿ ತಿಳಿಸಿದರು.
ಈ ಪ್ರಕರಣಗಳ ಕುರಿತು ಸಮಗ್ರ ವರದಿಯೊಂದಿಗೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿ ಇಲಾಖೆಯ ಕಮಿಷನರ್‌ಗೆ ಬರೆದಿರುವುದಾಗಿ ಸಿಇಒ ಹಾಗೂ ಡಿಎಚ್‌ಒ ಅವರು ಉತ್ತರಿಸಿದರು. ಈ ಪ್ರಕರಣಗಳ ಕುರಿತು ಸಮಗ್ರ ವರದಿಯೊಂದಿಗೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿ ಇಲಾಖೆಯ ಕಮಿಷನರ್‌ಗೆ ಬರೆದಿರುವುದಾಗಿ ಸಿಇಒ ಹಾಗೂ ಡಿಎಚ್‌ಒ ಅವರು ಉತ್ತರಿಸಿದರು.
ಜಿಲ್ಲೆಯಲ್ಲಿ ಹೆಚ್ಚೆಚ್ಚು ಕೆಎಸ್ಸಾರ್ಟಿಸಿ ಬಸ್ ಸೇವೆಗೆ ಸದಸ್ಯರ ಆಗ್ರಹ:
ಜಿಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಇಂದು ಮಣಿಪಾಲದ ರಜತಾದ್ರಿಯಲ್ಲಿರುವ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕೆಲವು ಸದಸ್ಯರು ಈ ಬಸ್‌ಗಳು ಸಮಯ ಪಾಲನೆ ಮಾಡದಿರುವ ಬಗ್ಗೆ, ಪ್ರಯಾಣಿಕರಿಗೆ ಟಿಕೇಟ್ ನೀಡದೇ ಅಲ್ಲಲ್ಲಿ ನಿಗಮಕ್ಕೆ ವಂಚಿಸುತ್ತಿರುವ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ಕೆಎಸ್ಸಾರ್ಟಿಸಿಯ ಅಧ್ಯಕ್ಷ ಹಾಗೂ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರ ಗಮನವನ್ನು ಸೆಳೆದರು.
ಜಿಪಂ ಸದಸ್ಯರಾದ ರೇಷ್ಮಾ ಉದಯ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬುಶೆಟ್ಟಿ, ಗೌರಿ ದೇವಾಡಿಗ, ಜನಾರ್ದನ ತೋನ್ಸೆ, ಶೋಭಾ ಜಿ. ಪುತ್ರನ್ ಸರಕಾರಿ ಬಸ್‌ಗಳು ಸೇವೆಯನ್ನು ಇನ್ನಷ್ಟು ಉತ್ತಮವಾಗಿ ನೀಡುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರಲ್ಲದೆ, ಕುಂದುಕೊರತೆ ನಿವಾರಿಸುವಂತೆ ಮನವಿ ಮಾಡಿದರು.
ಶೇ.81 ತೆರಿಗೆ ಸಂಗ್ರಹ:
ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ಗ್ರಾಪಂಗಳ ತೆರಿಗೆ ಸಂಗ್ರಹದ ಕುರಿತಂತೆ ಅಧ್ಯಕ್ಷ ದಿನಕರ ಬಾಬು ಅವರಿಗೆ ಮಾಹಿತಿಗಳನ್ನು ನೀಡಿದ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಮಾರ್ಚ್ ತಿಂಗಳವರೆಗೆ ಜಿಲ್ಲೆಯಲ್ಲಿ ಒಟ್ಟು ಗುರಿಯ ಶೇ.81ರಷ್ಟು ತೆರಿಗೆ ಸಂಗ್ರಹವಾಗಿದೆ. ಉಡುಪಿ ತಾಲೂಕಿನಲ್ಲಿ ಶೇ,79, ಕುಂದಾಪುರದಲ್ಲಿ ಶೇ.83 ಹಾಗೂ ಕಾರ್ಕಳ ತಾಲೂಕಿನಲ್ಲಿ ಶೇ.85ರಷ್ಟು ತೆರಿಗೆ ಸಂಗ್ರಹವಾಗಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಒಟ್ಟು 14.70 ಕೋಟಿ ರೂ. ತೆರಿಗೆ ಸಂಗ್ರವಾಗಿದೆ. ಇನ್ನೂ 3.43 ಕೋಟಿ ರೂ.ತೆರಿಗೆ ಸಂಗ್ರಹವಾಗಬೇಕಿದೆ. ಇತ್ತೀಚೆಗೆ ಸರಕಾರ ತೆರಿಗೆಯನ್ನು ಪರಿಷ್ಕರಿಸಿರುವುದರಿಂದ ಈ ವಿಳಂಬವಾಗಿದೆ ಎಂದವರು ವಿವರಿಸಿದರು.
ಇದುವರೆಗೆ ಬಾಡಿಗೆ ಮೌಲ್ಯದ ಆಧಾರದಲ್ಲಿ ತೆರಿಗೆ ನಿರ್ಧರಿಸುತಿದ್ದರೆ, ಇನ್ನು ಮುಂದೆ ಸೊತ್ತಿನ ವೌಲ್ಯದ ಆಧಾರದಲ್ಲಿ ತೆರಿಗೆ ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಪ್ರತಿ ಗ್ರಾಪಂ ಪಿಡಿಒಗಳಿಗೆ ತರಬೇತಿಯನ್ನು ನೀಡಲಾಗಿದೆ. ಅವರಿಗೆ ಜು.15ರೊಳಗೆ ಎಲ್ಲಾ ಮನೆಗಳ ತೆರಿಗೆಯನ್ನು ನಿರ್ಧರಿಸುವಂತೆ ಸೂಚಿಸಲಾಗಿದೆ ಎಂದು ರಾವ್ ವಿವರಿಸಿದರು.
ಶಿಥಿಲಾವಸ್ಥೆಯಲ್ಲಿರುವ 11 ಶಾಲೆಗಳನ್ನು ಗುರುತಿಸಿ ಪಟ್ಟಿ ತಯಾರಿಸಲಾಗಿದ್ದು, ಅವುಗಳ ದುರಸ್ತಿಗೆ ಅಂದಾಜುಪಟ್ಟಿ ತಯಾರಿಸಲಾಗುತ್ತಿದೆ ಎಂದು ಡಿಡಿಪಿಐ ದಿವಾಕರ ಶೆಟ್ಟಿ ಸದಸ್ಯರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗೋಪಾಡಿಯ ಎಎನ್‌ಎಂ ಸಮಸ್ಯೆ, ಕುಂದಾಪುರ ಆಸ್ಪತ್ರೆ ಸಮಸ್ಯೆಗಳ ಕುರಿತಂತೆಯೂ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು.
ಈ ಬಾರಿಯ ಅಖಿಲ ಭಾರತ ಮಟ್ಟದ ಐಐಟಿಗಳಿಗೆ ಪ್ರವೇಶ ಕಲ್ಪಿಸುವ ಜೆಇಇ ಪರೀಕ್ಷೆಯಲ್ಲಿ 1148ನೇ ರ್ಯಾಂಕ್ ಪಡೆದ ಜಿಲ್ಲೆಯ ಪ್ರಥಮ ಕೊರಗ ಜನಾಂಗದ ವಿದ್ಯಾರ್ಥಿನಿ ಕುಂಭಾಶಿಯ ಗಣೇಶ ಕೊರಗ ಅವರ ಪುತ್ರಿ ಸಾಕ್ಷಿ ಅವರನ್ನು ಜಿಪಂ ವತಿಯಿಂದ ಸನ್ಮಾನಿಸಲಾಯಿತು. ಅದೇ ರೀತಿ ಎಸೆಸೆಲ್ಸಿ ಪರೀಕ್ಷೆ ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಅಭಿನಂದಿಸಲಾಯಿತು. ಈ ಬಾರಿಯ ಅಖಿಲ ಭಾರತಮಟ್ಟದ ಐಐಟಿಗಳಿಗೆ ಪ್ರವೇಶ ಕಲ್ಪಿಸುವ ಜೆಇಇ ಪರೀಕ್ಷೆಯಲ್ಲಿ 1148ನೇ ರ್ಯಾಂಕ್ ಪಡೆದ ಜಿಲ್ಲೆಯ ಪ್ರಥಮ ಕೊರಗ ಜನಾಂಗದ ವಿದ್ಯಾರ್ಥಿನಿ ಕುಂಭಾಶಿಯ ಗಣೇಶ ಕೊರಗ ಅವರ ಪುತ್ರಿ ಸಾಕ್ಷಿ ಅವರನ್ನು ಜಿಪಂ ವತಿಯಿಂದ ಸನ್ಮಾನಿಸಲಾಯಿತು.
ಅದೇ ರೀತಿ ಎಸೆಸೆಲ್ಸಿ ಪರೀಕ್ಷೆ ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಅಭಿನಂದಿಸಲಾಯಿತು. ಅದೇ ರೀತಿ ಈ ತಿಂಗಳು ಸೇವಾ ನಿವೃತ್ತಿ ಹೊಂದುತ್ತಿರುವ ಜಿಪಂನ ಯೋಜನಾ, ಅಂದಾಜು ಮತ್ತು ವೌಲ್ಯಮಾಪನಾಧಿಕಾರಿ ಶಂಕರ ನಾಯಕ್‌ರನ್ನು ಜಿಪಂನ ವತಿಯಿಂದ ಸಿಇಒ, ಅದ್ಯಕ್ಷರು ಸನ್ಮಾನಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಶಾಸಕರಾದ ಕೆ.ಗೋಪಾಲ ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಎಸ್ ಕೋಟ್ಯಾನ್, ಶಶಿಕಾಂತ್ ಪಡುಬಿದ್ರೆ, ಬಾಬು ಶೆಟ್ಟಿ ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿ ದ್ದರು. ಸಿಪಿಒ ಶ್ರೀನಿವಾಸ ರಾವ್ ಸ್ವಾಗತಿಸಿದರು.







