ಕೆ.ಸಿ.ರೋಡ್ ನಲ್ಲಿ ಬ್ಯಾಂಕ್ ದರೋಡೆಗೆ ಯತ್ನ

ಮಂಗಳೂರು, ಜೂ. 23: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ. ರೋಡ್ ಶಾಖೆಯಲ್ಲಿ ದರೋಡೆಗೆ ಯತ್ನಿಸಿದ ಘಟನೆ ಇದೀಗ ನಡೆದಿದೆ.
ಹೆಲ್ಮೆಟ್ ಧರಿಸಿಕೊಂಡು ಬ್ಯಾಂಕ್ ಒಳಗೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ದರೋಡೆಕೋರರು ಕರ್ತವ್ಯದಲ್ಲಿದ್ದ ಮೂವರು ಸಿಬ್ಬಂದಿಗಳಿಗೆ ಚೂರಿ ತೋರಿಸಿ ಬೆದರಿಸಿ ಅವರನ್ನು ಶೌಚಾಲಯದೊಳಗೆ ಕೂಡಿ ಹಾಕಿ ಚಿನ್ನಾಭರಣವನ್ನು ದೋಚಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಕೋಟ್ಯಂತರ ರೂ. ಬೆಲೆಬಾಳುವ ಸುಮಾರು 20 ಕೆಜಿ ಚಿನ್ನವನ್ನು 50ಕೆಜಿಯ ಗೋಣಿ ಚೀಲದಲ್ಲಿ ತುಂಬಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭ ಶೌಚಾಲಯದಲ್ಲಿದ್ದ ಸಿಬ್ಬಂದಿಯೋರ್ವ ಪರಾರಿಯಾಗಲು ಯತ್ನಿಸುತ್ತಿದ್ದ ದರೋಡೆಕೋರರಿಗೆ ಕಲ್ಲು ಎಸೆದಿದ್ದು ಈ ಸಂದರ್ಭ ದರೋಡೆಕೋರರು ಚಿನ್ನ ತುಂಬಿಸಿದ್ದ ಗೋಣಿ ಚೀಲವನ್ನು ಅಲ್ಲೇ ಬಿಟ್ಟು ಪರಾರಿಯಾದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಡಿಸಿಪಿ ಹನುಮಂತ್ರಾಯ, ಎಸಿಪಿ ಶೃತಿ ಹಾಗೂ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಘಟನೆ ವಿವರ: ಕಪ್ಪು ಪಲ್ಸರ್ ಬೈಕಿನಲ್ಲಿ ಹೆಲ್ಮೆಟ್ ಮತ್ತು ಜಾಕೆಟ್ ಧರಿಸಿ ಬಂದಿದ್ದ ಇಬ್ಬರು ದರೋಡೆಕೋರರು ಕೈಗಳಿಗೂ ಗ್ಲೌಸ್‌ಗಳನ್ನು ತೊಟ್ಟು ಮೊದಲಿಗೆ ಬ್ಯಾಂಕ್‌ನ ಕಾವಲುಗಾರ ಉಮೇಶ್(50)ರನ್ನು ಒತ್ತೆಯಾಳಾಗಿರಿಸಿಕೊಂಡು ಬ್ಯಾಂಕ್ ಕಚೇರಿಯೊಳಗೆ ನುಗ್ಗಿದ್ದಾರೆ. ಬ್ಯಾಂಕ್‌ನೊಳಗಿದ್ದ ಸರಪ್ಪ ರಾಮಚಂದ್ರ ಮತ್ತು ಸಿಬ್ಬಂದಿಗಳಾದ ಶ್ರೀಮತಿ ಮನೋಹರಿ ಮತ್ತು ಸುಧೀರ್ ಅವರಿಗೆ ಚಾಕು ತೋರಿಸಿ ಬೆದರಿಸಿ ಮೊಬೈಲ್‌ಗಳನ್ನು ವಶಕ್ಕೆ ಪಡೆದ ನಂತರ ಕಾವಲುಗಾರರನ್ನು ಬಿಟ್ಟು ಉಳಿದ ಮೂವರು ಸಿಬ್ಬಂದಿಗಳನ್ನು ಕಚೇರಿಯೊಳಗಿದ್ದ ಟಾಯ್ಲೆಟ್ ಒಳಗಡೆ ಕೂಡಿ ಹಾಕಿದ್ದಾರೆ.
ಕಾವಲುಗಾರನ ಬಾಯಿಗೆ ಬಟ್ಟೆ ಕಟ್ಟಿದ ದರೋಡೆಕೋರರು ಲಾಕರ್‌ನಿಂದ 50 ಕೆ.ಜಿ ತೂಗುವ ಗೋಣಿ ಚೀಲದಲ್ಲಿ ಅರ್ಧದಷ್ಟು ಪ್ರಮಾಣದಲ್ಲಿ ಸಮಾರು 25 ಕೆ.ಜಿ ಚಿನ್ನದ ಒಡವೆಗಳನ್ನು ತುಂಬಿಸಿ ಮುಖ್ಯ ದ್ವಾರದ ಷಟರ್ ತೆರೆದು ತರಾತುರಿಯಲ್ಲಿ ಓಡಲೆತ್ನಿಸಿದರು.
ಚಾಣಾಕ್ಷತನ ಮೆರೆದ ಸರಪ್ಪ ರಾಮಚಂದ್ರ: ಬ್ಯಾಂಕ್‌ಗೆ ನುಗ್ಗಿದ ದರೋಡೆಕೋರರು ಅರ್ಧಗೋಣಿಯಷ್ಟು ಚಿನ್ನವನ್ನು ಎಗರಿಸಿ ಮುಖ್ಯ ದ್ವಾರದ ಷಟರ್ ಹಾಕಿ ಓಡಲೆತ್ನಿಸಿದಾಗ ಟಾಯ್ಲೆಟಲ್ಲಿ ಬಂಧಿಯಾಗಿದ್ದ ದೇರಳಕಟ್ಟೆ ನಿವಾಸಿ ಸರಪ್ಪ ರಾಮಚಂದ್ರ(40)ರು ಟಾಯ್ಲೆಟಿನ ಫೈಬರ್ ಬಾಗಿಲನ್ನು ಒಡೆದು ಹೊರಬಂದಿದ್ದು, ಇಬ್ಬರು ಆಗಂತುಕರನ್ನು ಬೆನ್ನಟ್ಟಿದ್ದಾರೆ.
ಕಲ್ಲು ಎಸೆದು ಚಿನ್ನ ರಕ್ಷಿಸಿದರು: ಮೊದಲಿಗೆ ಬೈಕ್ ಸ್ಟಾರ್ಟ್ ಮಾಡುತ್ತಿದ್ದ ದರೋಡೆಕೋರನ ಎದೆಗೆ ರಾಮಚಂದ್ರರು ಕಲ್ಲನ್ನು ಎಸೆದುದರ ಪರಿಣಾಮ ಆತ ತನ್ನ ಇನ್ನೊಬ್ಬನನ್ನು ಬಿಟ್ಟು ಮುಂದಕ್ಕೆ ಚಲಿಸಿದ್ದಾನೆ. ಇನ್ನೋರ್ವ ದರೋಡೆಕೋರ ಚಿನ್ನದ ಗೋಣಿ ಚೀಲವನ್ನು ಹಿಡಿದು ರಸ್ತೆಯಲ್ಲೇ ಚಲಿಸುತ್ತಿದ್ದ ಬೈಕಿನ ಹಿಂದೆ ಓಡಲಾರಂಭಿಸಿದಾಗ ಆತನಿಗೂ ಕಲ್ಲಿನಿಂದ ಮತ್ತೊಂದು ಏಟನ್ನು ರಾಮಚಂದ್ರರು ಹೊಡೆದಿದ್ದಾರೆ. ಇದರ ಪರಿಣಾಮ ಆತ ಗೋಣಿಯನ್ನು ಅಲ್ಲೇ ಬಿಟ್ಟು ಬೈಕ್ ಏರಿದ್ದು ಇಬ್ಬರೂ ಭಯದಿಂದ ಅಲ್ಲಿಂದ ಪರಾರಿಯಾಗಿದ್ದಾರೆ. ರಾಮಚಂದ್ರರ ಸಮಯಪ್ರಜ್ನೆ ಮತ್ತು ಸಾಹಸದಿಂದಾಗಿ ಸುಮಾರು ಆರು ಕೋಟಿಗೂ ಅಧಿಕ ರೂಪಾಯಿ ಮೌಲ್ಯದ ಚಿನ್ನವು ಸುರಕ್ಷಿತವಾಗಿ ಬ್ಯಾಂಕ್‌ಗೆ ಮತ್ತೆ ಲಭಿಸಿದೆ.
ನಿಷ್ಕ್ರೀಯಗೊಂಡಿದ್ದ ಸಿ.ಸಿ ಕ್ಯಾಮೆರಾ: ಬ್ಯಾಂಕ್ ಒಳಗಿದ್ದ ಸಿ.ಸಿ ಕ್ಯಾಮೆರಾವು ಕೆಲವು ದಿನಗಳ ಹಿಂದಷ್ಟೇ ನಿಷ್ಕ್ರಿಯಗೊಂಡಿತ್ತು. ಬ್ಯಾಂಕ್‌ಗೆ ಅಧಿಕೃತ ಕಂಪನಿಯ ಗಾರ್ಡನ್ನೂ ನೇಮಿಸದೆ, ಸಾರ್ವಜನಿಕರ ಅಮೂಲ್ಯ ಒಡವೆಗಳಿಗೆ ಸರಿಯಾದ ಭಧ್ರತೆಯ ಲಾಕರ್ ಕಲ್ಪಿಸದೆ, ಸಿಸಿ ಕ್ಯಾಮೆರಾವನ್ನೂ ದುರಸ್ಥಿ ಮಾಡದ ಬ್ಯಾಂಕ್ ಆಡಳಿತವನ್ನು ಡಿಸಿಪಿ ಹನುಮಂತರಾಯ ಅವರು ತರಾಟೆಗೆ ತೆಗೆದಿದ್ದಾರೆ. ಹತ್ತಿರದ ಜ್ಯುವೆಲ್ಲರಿ ಶಾಪ್‌ನ ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಚಿತ್ರ ಸೆರೆಯಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪಲ್ಸರ್‌ನಲ್ಲಿ ಬಂದಿದ್ದ ಕಳ್ಳರು: ಸಮೀಪದ ಅಂಗಡಿಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಪ್ಪು ಪಲ್ಸರ್‌ನಲ್ಲಿ ಹೆಲ್ಮೆಟ್‌ಗಳನ್ನು ಧರಿಸಿ ಮಧ್ಯಾಹ್ನ 12.59 ಗಂಟೆಗೆ ಬಂದಿಳಿದ ಇಬ್ಬರು ಆಗಂತುಕರು ಮತ್ತೆ ಜಾಕೆಟ್ ಮತ್ತು ಕೈಚೀಲಗಳನ್ನು ತೊಟ್ಟು ದರೋಡೆ ನಡೆಸಿ ಪರಾರಿಯಾಗಿರುವ ದೃಶ್ಯ ಕಂಡು ಬಂದಿದೆ. ಎಸಿಪಿ ಶೃತಿ, ಉಳ್ಳಾಲ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಬೆರಳಚ್ಚು ತಜ್ನರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಂಲ್ಲಿ ಪ್ರಕರಣ ದಾಖಲಾಗಿದೆ.