‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಬಿಜೆಪಿಯಿಂದ ಸಾಧ್ಯವಿಲ್ಲ: ಮುಖ್ಯಮಂತ್ರಿ

ಬೆಂಗಳೂರು, ಜೂ.23: ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’(ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ) ಬಿಜೆಪಿಯವರಿಂದ ಎಂದಿಗೂ ಸಾಧ್ಯವಿಲ್ಲ. ಅವರದ್ದೇನಿದರೂ ಢೋಂಗಿತನ. ಜನರನ್ನು ಮೂರ್ಖರನ್ನಾಗಿಸಲು ಹೋಗಿ ಅವರೆ ಮೂರ್ಖರಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು ಸೇರಿದಂತೆ ಎಲ್ಲ ವರ್ಗಗಳನ್ನು ಜೊತೆಗೆ ಕರೆದೊಯ್ಯುತ್ತಿರುವ ನಾವೇ ನಿಜವಾಗಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಅನುಷ್ಠಾನಗೊಳಿಸುತ್ತಿದ್ದೇವೆ ಎಂದರು.
ಬಿಜೆಪಿ ಅಂದರೆ ವ್ಯಾಪಾರಸ್ಥರ ಪಕ್ಷ. ಅವರನ್ನು ನಂಬಲು ಸಾಧ್ಯವೇ. ‘ಬಿಜೆಪಿ ನಡಿಗೆ ದಲಿತರ ಕಡೆಗೆ’ ಅಂತ ನಾಟಕ ಮಾಡುತ್ತಿದ್ದಾರೆ. ನಿಜವಾಗಿ ದಲಿತರ ಪರ ಕಾಳಜಿಯಿದ್ದರೆ ಅವರ ಮಕ್ಕಳನ್ನು ದಲಿತರಿಗೆ, ದಲಿತರ ಮಕ್ಕಳನ್ನು ತಮ್ಮ ಮಕ್ಕಳ ಜೊತೆ ಮದುವೆ ಮಾಡಿಕೊಡಲಿ. ಅದನ್ನೆಲ್ಲ ಬಿಟ್ಟು ದಲಿತರ ಮನೆಗೆ ಹೋಗಿ ಹೊಟೇಲ್ ತಿಂಡಿ ತಂದು ತಿನ್ನೋದಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪನಂತವರನ್ನು ಸಾಕಷ್ಟು ಜನರನ್ನು ನೋಡಿದ್ದೇನೆ. ಯಾರ ಬೆದರಿಕೆಗೂ ಜಗ್ಗಿ ನಾನು ಸಾಲ ಮನ್ನಾ ಮಾಡಿಲ್ಲ. ರೈತ ಪರವಾದ ಕಾಳಜಿ ಕಾಂಗ್ರೆಸ್ಸಿಗಿದೆ. ದೇಶದಲ್ಲಿ ಹಸಿರು ಕ್ರಾಂತಿ ಮಾಡಿದವರು ಇಂದಿರಾಗಾಂಧಿ ಹಾಗೂ ಬಾಬು ಜಗಜೀವನ್‌ರಾಮ್. ದೇಶದಲ್ಲಿ ಆಹಾರ ಭದ್ರತೆ ಮಾಡಿದವರು ಕಾಂಗ್ರೆಸ್‌ನವರು, ಬಿಜೆಪಿಯವರಲ್ಲ. ದೇಶಕ್ಕಾಗಿ ಬಿಜೆಪಿಯವರ ಕೊಡುಗೆ ಶೂನ್ಯ ಎಂದು ಮುಖ್ಯಮಂತ್ರಿ ಹೇಳಿದರು.
ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡದೆ ಇರುವ ಸಾಧನೆಯನ್ನು ಕೇವಲ ಐದು ವರ್ಷಗಳಲ್ಲಿ ಮಾಡುತ್ತೇವೆ ಎಂದು ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅಟಲ್‌ಬಿಹಾರಿ ವಾಜಪೇಯಿ ಕಾಲದಲ್ಲಿ ‘ಇಂಡಿಯಾ ಇಸ್ ಶೈನಿಂಗ್’(ಭಾರತ ಪ್ರಕಾಶಿಸುತ್ತಿದೆ) ಅಂತಾ ಚುನಾವಣೆಗೆ ಹೋದರು. ಆದರೆ, ಸೋತರು. ದೇಶಕ್ಕೆ ಬಿಜೆಪಿ ಕೊಟ್ಟ ಕೊಡುಗೆ ಸುಳ್ಳು ಎಂದು ಅವರು ಕಿಡಿಗಾರಿದರು.
ಉತ್ತರ ಪ್ರದೇಶ ಚುನಾವಣೆ ವೇಳೆ ಪ್ರಧಾನಿ ನರೇಂದ್ರಮೋದಿ ರೈತರ ಸಾಲಮನ್ನಾ ಮಾಡುವ ಬಗ್ಗೆ ಹೇಳಿದ್ದರು. ಆದರೆ, ಅವರ ಸಂಪುಟದಲ್ಲಿರುವ ಸಚಿವ ವೆಂಕಯ್ಯ ನಾಯ್ಡು ರೈತರ ಸಾಲ ಮನ್ನಾ ಮಾಡೋದನ್ನು ಫ್ಯಾಷನ್(ಶೋಕಿ) ಅಂತಾರೆ. ಕೇಂದ್ರ ಹಣಕಾಸು ಸಚಿವ ಹಾಗೂ ಆರ್‌ಬಿಐ ಗವರ್ನರ್ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ರೈತರ ಸಾಲ ಮನ್ನಾ ಮಾಡಲು ಸಿದ್ದರಾಮಯ್ಯಗೇನು ದಾಡಿ ಅಂತಾ ಯಡಿಯೂರಪ್ಪ ಹೇಳುತ್ತಿದ್ದರು. ಶರ್ಟಿನ ಕಾಲರ್, ಮೂಗು ಹಿಡಿದು ಸಾಲ ಮನ್ನಾ ಮಾಡಿಸುತ್ತೇನೆ ಎನ್ನುತ್ತಿದ್ದರು. ಈಗ ಮನಮೋಹನ್ ಸಿಂಗ್ ಶರ್ಟ್ ಹಿಡಿದು ಯಡಿಯೂರಪ್ಪ ಕೇಳಲಿ ಎಂದರು. ಬಳಿಕ ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡು ನರೇಂದ್ರಮೋದಿಯ ಕಾಲರ್ ಹಿಡಿದು ಯಡಿಯೂರಪ್ಪ ಸಾಲ ಮನ್ನಾ ಮಾಡಿಸಲಿ ಎಂದು ಅವರು ಸವಾಲು ಹಾಕಿದರು.
ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಪ್ರಚಾರಕ್ಕಾಗಿ ಕೃಷಿ ಬಜೆಟ್ ಮಂಡನೆ ಮಾಡಿದ ಯಡಿಯೂರಪ್ಪ ಢೋಂಗಿತನ ಪ್ರದರ್ಶಿಸುತ್ತಿದ್ದಾರೆ. ತಮ್ಮಷ್ಟಕ್ಕೆ ತಾವೇ ರೈತ ಮಕ್ಕಳು, ಮಣ್ಣಿನ ಮಕ್ಕಳು ಅಂತಾ ಹೇಳಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದರು.
ನಾವು ಗದ್ದೇಲಿ ಕೆಲಸ ಮಾಡಿದ್ದೇವೆ. ಕಾಲೇಜಿಗೆ ಹೋಗುವಾಗಲು ದನಕರುಗಳಿಗೆ ಮೇವು ತರೋದು, ಹೊಲ ಉಳೋದು ಮಾಡುತ್ತಿದ್ದೆವು. ಆದರೆ, ಯಡಿಯೂರಪ್ಪ, ಕುಮಾರಸ್ವಾಮಿಗೆ ಹೊಲ ಉಳೋದು, ಬಿತ್ತೋದು ಗೊತ್ತಿಲ್ಲ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲೆ ಸಾಲ ಮನ್ನಾ ಮಾಡುತ್ತೇವೆ ಅಂತಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದರು ಅನ್ನೋದು ಜನರಿಗೆ ತಿಳಿಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಉತ್ತರನ ಪೌರುಷ: ಬಿಜೆಪಿಯವರದ್ದು ಉತ್ತರನ ಪೌರುಷ ಒಲೆ ಮುಂದೆ ಇದ್ದಂಗೆ. ಪ್ರಧಾನಿ ಭೇಟಿ ವೇಳೆಯೂ ಬಿಜೆಪಿಯವರು ರೈತರ ಸಾಲ ಮನ್ನಾ ವಿಚಾರದ ಬಗ್ಗೆ ಚಕಾರ ಎತ್ತಲಿಲ್ಲ. ಸಂಸತ್ತಿನಲ್ಲೂ ಶೋಭಾ ಕರಂದ್ಲಾಜೆ, ಯಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡ ಸೇರಿದಂತೆ ಯಾರೊಬ್ಬರೂ ರೈತರ ಸಾಲ ಮನ್ನಾ ಬಗ್ಗೆ ಮಾತಾಡಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ರಾ. ಉತ್ತರ ಪ್ರದೇಶ ಸರಕಾರ ಹೇಳಿರುವುದು ಸಣ್ಣ, ಅತೀ ಸಣ್ಣ ರೈತರ ಓವರ್ ಡ್ಯೂ ಆಗಿರುವ ಸಾಲ ಮನ್ನಾ ಮಾಡುತ್ತೇವೆ ಎಂದು. ಆದರೆ, ಈವರೆಗೆ ಆದೇಶ ಹೊರಡಿಸಿಲ್ಲ. ಆದರೆ, ನಾವು ರೈತರ ಸಾಲ ಮನ್ನಾ ಮಾಡುವ ಸಂಬಂಧ ನಾಳೆಯೆ ಸರಕಾರಿ ಆದೇಶವನ್ನು ಹೊರಡಿಸುತ್ತೇವೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ನಡೆಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.







