ಜೀತನ್ ಪಟೇಲ್ ವಿದಾಯ

ವೆಲ್ಲಿಂಗ್ಟನ್, ಜೂ.22: ಭಾರತ ಮೂಲದ ನ್ಯೂಝಿಲೆಂಡ್‌ನ ಆಫ್ ಸ್ಪಿನ್ನರ್ ಜೀತನ್ ಪಟೇಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ತನ್ನ ಮಾಜಿ ಸಹ ಆಟಗಾರ ಲ್ಯುಕ್ ರೊಂಚಿ ಹಾದಿ ತುಳಿದಿದ್ದಾರೆ.
ಪ್ರಸ್ತುತ ಇಂಗ್ಲೆಂಡ್‌ನಲ್ಲಿ ವಾರ್ವಿಕ್‌ಶೈರ್ ತಂಡದ ಪರ ಆಡುತ್ತಿರುವ ಪಟೇಲ್ ನ್ಯೂಝಿಲೆಂಡ್‌ನ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿದ್ದರು. ಆದರೆ, ಯಾವುದೇ ಪಂದ್ಯವನ್ನು ಆಡುವ ಅವಕಾಶ ಪಡೆದಿರಲಿಲ್ಲ. ಕಳೆದ ತಿಂಗಳು ಐರ್ಲೆಂಡ್ ವಿರುದ್ಧದ ತ್ರಿಕೋನ ಏಕದಿನ ಸರಣಿಯಲ್ಲಿ ಕಿವೀಸ್‌ನ ಪರ ಕೊನೆಯ ಪಂದ್ಯ ಆಡಿದ್ದರು.
ಪಟೇಲ್ 2005ರಲ್ಲಿ ಝಿಂಬಾಬ್ವೆ ವಿರುದ್ಧ ಚೊಚ್ಚಲ ಏಕದಿನ ಪಂದ್ಯ ಆಡಿದ್ದರು. ಕೆಲವೇ ತಿಂಗಳ ಬಳಿಕ ದಕ್ಷಿಣ ಆಫ್ರಿಕದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. 37ರ ಹರೆಯದ ಪಟೇಲ್ ಕಳೆದ ವರ್ಷ ಭಾರತ ವಿರುದ್ಧ ಭಾರತದ ವಿರುದ್ಧವೇ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ಗಾಯಾಳು ಮಾರ್ಕ್ ಕ್ರೆಗ್ ಬದಲಿಗೆ ತಂಡಕ್ಕೆ ಸೇರಿದ್ದ ಅವರು ಆಡುವ ಅವಕಾಶ ಪಡೆದಿದ್ದರು. ಕಳೆದ ವರ್ಷ ಕೌಂಟಿ ಚಾಂಪಿಯನ್‌ಶಿಪ್‌ನಲಿ ಗರಿಷ್ಠ ವಿಕೆಟ್ ಪಡೆದಿದ್ದ ಹಿನ್ನೆಲೆಯಲ್ಲಿ 2013 ಜನವರಿ ಬಳಿಕ ಮೊದಲ ಬಾರಿ ಟೆಸ್ಟ್ ಆಡುವ ಅವಕಾಶ ಪಡೆದಿದ್ದರು.
ಪಟೇಲ್ 24 ಟೆಸ್ಟ್‌ಗಳಲ್ಲಿ 65 ವಿಕೆಟ್, 43 ಏಕದಿನದಲ್ಲಿ 49 ವಿಕೆಟ್ ಹಾಗೂ 11 ಟ್ವೆಂಟಿ-20 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ.







