ಮಕ್ಕಾ ಮಸೀದಿ ಮೇಲೆ ದಾಳಿ ಯತ್ನ: ಉಗ್ರನ ಹತ್ಯೆ

ರಿಯಾದ್, ಜೂ.24: ಮುಸ್ಲಿಮರ ಪವಿತ್ರ ಮಕ್ಕಾದ ಗ್ರಾಂಡ್ ಮಸೀದಿ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದ ಆತ್ಮಹತ್ಯಾ ಬಾಂಬರ್‌ನ್ನು ಹತ್ಯೆ ಮಾಡಿದ ಸೌದಿ ಭದ್ರತಾ ಪಡೆ ಯೋಧರು, ಸಂಭಾವ್ಯ ಭಾರಿ ಅನಾಹುತ ತಪ್ಪಿಸಿದ್ದಾರೆ.
ಭಾರಿ ಕಾಳಗದ ಬಳಿಕ ಒಬ್ಬ ಶಂಕಿತ ಉಗ್ರಗಾಮಿ ಮನೆಯೊಂದರಲ್ಲಿ ಸ್ಫೋಟಿಸಿಕೊಂಡಿದ್ದಾಗಿ ರಕ್ಷಣಾ ಸಚಿವಾಲಯ ಪ್ರಕಟಿಸಿದೆ. ಮಕ್ಕಾದಲ್ಲಿ ಶುಕ್ರವಾರ ನಡೆಸಿದ ಭದ್ರತಾ ಕಾರ್ಯಾಚರಣೆಯಲ್ಲಿ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಮನ್ಸೂರ್ ಅಲ್ ತುರ್ಕಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅಲ್ ಅರೇಬಿಯಾ ವೆಬ್‌ಸೈಟ್ ವರದಿ ಮಾಡಿದೆ.
ಮಕ್ಕಾ ಮೂಲದ ಎರಡು ಹಾಗೂ ಜಿದ್ದಾ ಮೂಲದ ಒಂದು ಸಂಘಟನೆ ಹೀಗೆ ಮೂರು ಸಂಘಟನೆಗಳು ಮಕ್ಕಾ ಮಸೀದಿಯ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದವು ಎಂದು ಸಚಿವಾಲಯ ತಿಳಿಸಿದೆ. ಆತ್ಮಹತ್ಯಾ ಬಾಂಬರ್, ಮಕ್ಕಾ ಮಸೀದಿಯ ಪಕ್ಕದ ಅಜ್ಯಾದ್ ಮಸಫಿಯ ಮನೆಯೊಂದರಲ್ಲಿ ಅಡಗಿದ್ದ. ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಆರಂಭಿಸಿದ ಬಳಿಕ ತಾನೇ ಸ್ಫೋಟಿಸಿಕೊಂಡ ಎಂದು ಅಲ್ ಅರೇಬಿಯಾ ವಿವರಿಸಿದೆ. ಘಟನೆಯಲ್ಲಿ ಭದ್ರತಾ ಪಡೆಯ ಐವರು ಸಿಬ್ಬಂದಿಗೆ ಗಾಯಗಳಾಗಿವೆ.





