ರೈಲಿನಲ್ಲಿ ವಾಗ್ವಾದ: ಮುಸ್ಲಿಂ ಯುವಕನ ಬರ್ಬರ ಹತ್ಯೆ

ಹೊಸದಿಲ್ಲಿ, ಜೂ.24: ದಿಲ್ಲಿಯಿಂದ ಮಥುರಾಗೆ ಹೊರಟಿದ್ದ ರೈಲಿನಲ್ಲಿ ಆಸನಕ್ಕಾಗಿ ಆರಂಭವಾದ ಜಗಳ, ಧಾರ್ಮಿಕ ನಿಂದನೆಯತ್ತ ತಿರುಗಿ ಯುವಕನ ಕೊಲೆಯಲ್ಲಿ ಪರ್ಯಾವಸಾನಗೊಂಡ ದುರಂತ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.
ಈದ್ ಶಾಪಿಂಗ್ ಮುಗಿಸಿ ತೆರಳುತ್ತಿದ್ದ ಕುಟುಂಬದ ಮೇಲೆ ಗುಂಪೊಂದು ಹಲ್ಲೆ ಮಾಡಿ, 16 ವರ್ಷಗಳ ಯುವಕನನ್ನು ಇರಿದು ಕೊಲೆ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ. ದಿಲ್ಲಿಯಿಂದ ಸುಮಾರು 60 ಕಿಲೋ ಮೀಟರ್ ದೂರದ ಓಕ್ಲಾ ಮತ್ತು ಅಸೋಟಿ ರೈಲು ನಿಲ್ದಾಣದ ನಡುವೆ ಈ ಘಟನೆ ಸಂಭವಿಸಿದೆ.
ಹಫೀಝ್ ಜುನೈದ್ (16) ಕೊಲೆಯಲ್ಲಿ ಶಾಮೀಲಾದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ದೇಶಾದ್ಯಂತ ಗೋಮಾಂಸ ಹಾಗೂ ಕಸಾಯಿಖಾನೆ ವಿವಾದದಲ್ಲಿ ಹಲವು ಮಂದಿ ಮುಸ್ಲಿಮರ ಮೇಲೆ ಹಲ್ಲೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ನತದೃಷ್ಟ ಕುಟುಂಬ ಹರ್ಯಾಣದ ಫರೀದಾಬಾದ್ ಜಿಲ್ಲೆ ಖದ್ದೌಲಿ ಎಂಬ ಪುಟ್ಟ ಗ್ರಾಮದವರಾಗಿದ್ದು, ದಾಳಿಕೋರರು ಪದೇಪದೇ ಇವರು ರಾಷ್ಟ್ರದ್ರೋಹಿಗಳು, ಗೋಮಾಂಸ ಭಕ್ಷಕರು; ಮುಲ್ಲಾಗಳು ಎಂದು ಹೀಯಾಳಿಸಿ ಹಲ್ಲೆ ನಡೆಸಿದರು. ಅವರ ತಲೆಮೇಲಿನ ಟೊಪ್ಪಿಯನ್ನು ಕಿತ್ತೆಸೆಯಿರಿ; ಅವರ ಗಡ್ಡ ಎಳೆಯಿರಿ ಎಂದು ಕೂಗುತ್ತಿದ್ದರು ಎಂದು ಗಾಯಾಳುಗಳು ಹೇಳಿದ್ದಾರೆ.
ಜುನೈದ್ ಗುಜರಾತ್‌ನ ಸೂರತ್‌ನಲ್ಲಿ ತನ್ನ ಸಹೋದರ ಹಾಶೀಂ (20) ಜತೆ ಇಸ್ಲಾಮಿಕ್ ಅಧ್ಯಯನ ಮಾಡುತ್ತಿದ್ದ. ಘಟನೆಯಲ್ಲಿ ಮುಹಮ್ಮದ್ ಮೌಸಿನ್ (16) ಹಾಗೂ ಮುಹಮ್ಮದ್ ಮೊಯಿನ್(18) ಕೂಡಾ ಗಾಯಗೊಂಡಿದ್ದಾರೆ.
ಘಟನೆ ಬಗ್ಗೆ ದೂರವಾಣಿ ಮೂಲಕ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಬಲ್ಲಾಬ್‌ಗಢ ಎಂಬಲ್ಲಿ ರೈಲು ಜುನೈದ್ ಅಣ್ಣ ಮುಹಮ್ಮದ್ ಶಾಕೀರ್ ಅವರಿಗೂ ಇರಿತದ ಗಾಯಗಳಾಗಿದ್ದು, ಎಐಐಎಂಎಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓಕ್ಲಾ ರೈಲು ನಿಲ್ದಾಣದಲ್ಲಿ 15-20 ಮಂದಿ ರೈಲು ಹತ್ತಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈ ನಾಲ್ಕು ಮಂದಿಯನ್ನು ಆಸನ ಬಿಟ್ಟುಕೊಡುವಂತೆ ಸೂಚಿಸಿದರು. ಇದಕ್ಕೆ ಯುವಕರು ಒಪ್ಪದಿದ್ದಾಗ ವಾಗ್ವಾದ ಆರಂಭವಾಯಿತು ಎಂದು ಹೇಳಲಾಗಿದೆ.
ಅತಿಯಾಗಿ ಜನಸಂದಣಿ ಇದ್ದ ರೈಲಿನಲ್ಲಿ ಗುಂಪಿನ ಒಬ್ಬ ವ್ಯಕ್ತಿ ಜುನೈದ್‌ನಲ್ಲಿ ತಳ್ಳಿದ. ಆಗ ನನ್ನ ಸಹೋದರ, ಸರಿಯಾಗಿ ವರ್ತಿಸಿ ಎಂದು ರೇಗಿದ. ಸಿಟ್ಟಿನಿಂದ ಆ ವ್ಯಕ್ತಿ ಜುನೈದ್‌ನ ಟೊಪ್ಪಿಯನ್ನು ನೆಲಕ್ಕೆಸೆದ. ನೀವು ದೇಶದ್ರೋಹಿಗಳು ಎಂದು ಕೂಗುತ್ತಾ ಸೀಟು ಬಿಟ್ಟುಕೊಡಬೇಕು ಎಂದು ಪಟ್ಟುಹಿಡಿದ. ಆಗ ಗುಂಪಿನಲ್ಲಿದ್ದ ಇತರರೂ ಸೇರಿಕೊಂಡು ಹಲ್ಲೆ ನಡೆಸಿದರು. ತುಘಲಕಾಬಾದ್ ನಿಲ್ದಾಣದಲ್ಲಿ ಆ ಬೋಗಿಯಿಂದ ಇಳಿದು ಮತ್ತೊಂದು ಬೋಗಿಗೆ ಹತ್ತಿ ಮತ್ತೊಬ್ಬ ಸಹೋದರನಿಗೆ ಕರೆ ಮಾಡಿದರು ಎಂದು ಶಾಕೀರ್ ಘಟನೆ ವಿವರ ನೀಡಿದ್ದಾರೆ.
''ಬಲ್ಲಬ್‌ಗಢದಲ್ಲಿ ರೈಲಿನಿಂದ ಇಳಿಯಲು ಮುಂದಾದಾಗ ಒಬ್ಬ ವ್ಯಕ್ತಿ ಚಾಕು ಹಿಡಿದು ಬಾಗಿಲಿಗೆ ಅಡ್ಡ ನಿಂತ. ಮೌಸಿನ್ ರೈಲಿನಿಂದ ಹಾರಿದಾಗ ಜುನೈದ್ ಹಾಗೂ ಮೊಯಿನ್ ಒಳಗೆ ಸಿಕ್ಕಿಹಾಕಿಕೊಂಡರು. ನಮ್ಮನ್ನು ರಕ್ಷಿಸಲು ಬಂದ ಶಾಕೀರ್ ಕೂಡಾ ಸಿಕ್ಕಿಹಾಕಿಕೊಂಡರು ಎಂದು ಹಾಶೀಂ ವಿವರಿಸಿದ್ದಾರೆ. ನಾಲ್ಕು ಮಂದಿ ಜುನೈದ್‌ನನ್ನು ಹಿಡಿದುಕೊಂಡು ಹಲವು ಬಾರಿ ಇರಿದರು. ನಾನು ಆತನ ರಕ್ಷಣೆಗೆ ಮುಂದಾದಾಗ ಮೂವರು ನನ್ನನ್ನು ಹಿಡಿದುಕೊಂಡರು. ಪ್ರಯಾಣಿಕರ ಎದುರೇ ಇಷ್ಟೆಲ್ಲ ನಡೆಯುತ್ತಿದ್ದರೂ ಯಾರೂ ರಕ್ಷಣೆಗೆ ಬರಲಿಲ್ಲ'' ಎಂದು ಅವರು ದೂರಿದ್ದಾರೆ. ಅಸ್ಟೋಗಿ ನಿಲ್ದಾಣದಲ್ಲಿ ಎಲ್ಲರನ್ನೂ ರೈಲಿನಿಂದ ಹೊರಕ್ಕೆ ತಳ್ಳಿದರು ಎನ್ನಲಾಗಿದೆ.







