ಪಾಕಿಸ್ತಾನದಲ್ಲಿ ಸರಣಿ ಸ್ಫೋಟ: 62 ಮಂದಿ ಬಲಿ

ಪೇಶಾವರ/ ಕರಾಚಿ, ಜೂ.24: ಈದ್ ಶಾಪಿಂಗ್ ಹಿನ್ನೆಲೆಯಲ್ಲಿ ಜನದಟ್ಟಣೆಯಿಂದ ಕೂಡಿದ್ದ ಮಾರುಕಟ್ಟೆ ಪ್ರದೇಶದಲ್ಲಿ ಸಂಭವಿಸಿದ ಅವಳಿ ಸ್ಫೋಟ ಸಂಭವಿಸಿದೆ. ಆತ್ಮಹತ್ಯಾ ದಾಳಿಕೋರನೊಬ್ಬ ಸ್ಫೋಟಕ ತುಂಬಿದ್ದ ಕಾರನ್ನು ಸ್ಫೋಟಿಸಿದ್ದಲ್ಲದೇ, ಇತರ ಮೂರು ನಗರಗಳಲ್ಲಿ ಭಯೋತ್ಪಾದಕರು ಪೊಲಿಸರತ್ತ ಗುಂಡುಹಾರಿಸಿದ್ದಾರೆ. ಉಗ್ರರ ಅಟ್ಟಹಾಸಕ್ಕೆ ಕನಿಷ್ಠ 62 ಮಂದಿ ಬಲಿಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ಆತ್ಮಹತ್ಯಾ ದಾಳಿಕೋರರು ಐಜಿಪಿ ಎಸಾನ್ ಮೆಹಬೂಬ್ ಕಚೇರಿ ಬಳಿ ಕಾರನ್ನು ಸ್ಫೋಟಿಸಿದ್ದು, ಘಟನೆಯಲ್ಲಿ 7 ಪೊಲೀಸರೂ ಸೇರಿದಂತೆ 13 ಮಂದಿ ಅಸುನೀಗಿದ್ದಾರೆ. ಇತರ 21 ಮಂದಿ ಗಾಯಗೊಂಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಸಹ ಸಂಘಟನೆಗಳು ಈ ಘಟನೆಯ ಹೊಣೆ ಹೊತ್ತಿವೆ.
ಇದಾದ ಒಂದು ಗಂಟೆಯಲ್ಲಿ ಶಿಯಾ ಪ್ರಾಬಲ್ಯದ ಪರಚಿನಾರ್ ನಗರದ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಪದೇ ಪದೇ ಸ್ಫೋಟ ಸಂಭವಿಸಿದಾಗ 35 ಮಂದಿ ಕೊಲ್ಲಲ್ಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡರು ಎಂದು ಅಧಿಕೃತ ಮೂಲಗಳು ಹೇಳಿವೆ.
ಈ ಘಟನೆಯ ಹಿಂದೆ ಯಾವ ಸಂಘಟನೆಯ ಕೈವಾಡ ಇದೆ ಎನ್ನುವುದು ಖಚಿತವಾಗಿಲ್ಲ.
ಕರಾಚಿಯಲ್ಲಿ ಹೆಲ್ಮೆಟ್‌ನಿಂದ ಮುಖ ಮುಚ್ಚಿಕೊಂಡಿದ್ದ ಇಬ್ಬರು ಬಂದೂಕುಧಾರಿಗಳು ರಸ್ತೆ ಬದಿ ಕರ್ತವ್ಯದಲ್ಲಿದ್ದ ನಾಲ್ವರು ಪೊಲೀಸರನ್ನು ಗುಂಡಿಟ್ಟು ಕೊಂದಿದ್ದಾರೆ.







