ಆಸ್ಟ್ರೇಲಿಯನ್ ಓಪನ್; ಶ್ರೀಕಾಂತ್ ಫೈನಲ್‌ಗೆ

ಸಿಡ್ನಿ, ಜೂ.24: ಭಾರತದ ಕೆ.ಶ್ರೀಕಾಂತ್ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಸೆಮಿಫೈನಲ್‌ನಲ್ಲಿ ಅವರು ಚೀನಾದ ನಾಲ್ಕನೆ ಶ್ರೇಂಯಾಂಕದ ಆಟಗಾರ ಶಿ ಯುಕಿ ಅವರನ್ನು 21-10,21-14 ಅಂತರದಿಂದ ಸೋಲಿಸಿ ಫೈನಲ್ ತಲುಪಿದರು.
ಇದರೊಂದಿಗೆ ಅವರು ಸತತ ಮೂರನೆ ಬಾರಿ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು.
ಸಿಡ್ನಿ ಒಲಿಂಪಿಕ್ಸ್ ಪಾರ್ಕ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಹಣಾಹಣಿಯಲ್ಲಿ ವಿಶ್ವದ 11ನೆ ಶ್ರೇಯಾಂಕದ ಆಟಗಾರ ಶ್ರೀಕಾಂತ್ ಅವರು ಎದುರಾಳಿ ಶಿ ಯುಕಿರನ್ನು ಕೇವಲ 37 ನಿಮಿಷಗಳಲ್ಲಿ ಮಣಿಸಿ ಕೂಟದಿಂದ ಹೊರದಬ್ಬಿದರು. ಕಳೆದ ಎಪ್ರಿಲ್‌ನಲ್ಲಿ ಶಿ ಯುಕಿ ವಿರುದ್ಧ ಸಿಂಗಾಪುರ ಓಪನ್ ಸೂಪರ್ ಸಿರೀಸ್‌ನಲ್ಲಿ ಜಯ ಗಳಿಸಿದ್ದರು.
ಸೈನಾ ನೆಹ್ವಾಲ್ 2014 ಮತ್ತು 2016ರಲ್ಲಿ ಸತತ ಎರಡು ಬಾರಿ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದರು. ಅವರ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೆ ಆಟಗಾರ ಎಂಬ ದಾಖಲೆಯನ್ನು ಬರೆಯಲು ಶ್ರೀಕಾಂತ್ ಪ್ರಯತ್ನ ನಡೆಸಲಿದ್ದಾರೆ.
ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಶ್ರೀಕಾಂತ್ ಅವರು ಒಲಿಂಪಿಕ್ಸ್ ಚಾಂಪಿಯನ್ ಚೆನ್ ಲಾಂಗ್ ಅಥವಾ ದಕ್ಷಿಣ ಕೊರಿಯಾದ ಲೀ ಹ್ಯೂನ್‌ರನ್ನು ಎದುರಿಸಲಿದ್ದಾರೆ.
ಕಳೆದ ರವಿವಾರ ಶ್ರೀಕಾಂತ್ ಅವರು ಇಂಡೋನೇಷ್ಯಾ ಓಪನ್ ಸೂಪರ್ ಸಿರೀಸ್‌ನಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.
ಇದರೊಂದಿಗೆ ಈ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಪುರುಷ ಆಟಗಾರ ಎನಿಸಿಕೊಂಡಿದ್ದರು.. ಇದು ಅವರಿಗೆ ದೊರೆತ ಮೂರನೆ ಸೂಪರ್ ಸಿರೀಸ್ ಪ್ರಶಸ್ತಿಯಾಗಿತ್ತು. ಭಾರತದ ಸೈನಾ ನೆಹ್ವಾಲ್ 10 ಸೂಪರ್ ಸಿರೀಸ್ ಪ್ರಶಸ್ತಿ ಗೆದ್ದುಕೊಂಡಿದ್ದರು.ಇದರಲ್ಲಿ ಮೂರು ಇಂಡೋನೇಷ್ಯಾ ಓಪನ್ ಪ್ರಶಸ್ತಿಯಾಗಿತ್ತು.





