ಅಮೆರಿಕದ ಮೆಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಡೀನ್ ಆಗಿ ಚೆನ್ನೈ ಮೂಲದ ಪ್ರೊ.ಅನಂತ ಚಂದ್ರಕಸನ್ ಆಯ್ಕೆ

ವಾಷಿಂಗ್ಟನ್, ಜೂ.24: ಭಾರತೀಯ ಮೂಲದ ಪ್ರೊಫೆಸರ್ ಅನಂತ ಪಿ. ಚಂದ್ರಕಸನ್ ಅವರನ್ನು ಅಮೆರಿಕದ ಪ್ರತಿಷ್ಠಿತ ಮೆಸಚುಸೆಟ್ಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡೀನ್ ಆಗಿ ನೇಮಿಸಲಾಗಿದೆ. ಪ್ರಸಕ್ತ ಈ ಸಂಸ್ಥೆಯ ಅತ್ಯಂತ ದೊಡ್ಡ ವಿಭಾಗವಾದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಆ್ಯಂಡ್ ಕಂಪ್ಯೂಟರ್ ಸಾಯನ್ಸ್ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥರಾಗಿರುವ ಅನಂತ ಜುಲೈ 1ರಂದು ಡೀನ್ ಆಗಿ ಅಧಿಕಾರ ವಹಿಸಲಿದ್ದಾರೆ. ಸದ್ಯ ಈ ಹುದ್ದೆಯಲ್ಲಿರುವ ಇಯಾನ್ ಎ ವೈಟ್ಝ್ ಅವರು ಎಂಐಟಿಯ ಉಪಕುಲಪತಿಯಾಗಲಿದ್ದಾರೆ.
ಕಳೆದ ಆರು ವರ್ಷಗಳಿಂದ ಸಂಸ್ಥೆಯ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಇಲಾಖೆಯ ಮುಖ್ಯಸ್ಥರಾಗಿದ್ದ ಅನಂತ ತಮ್ಮ ಸೇವಾವಧಿಯಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಲವು ಹೊಸ ಅವಕಾಶಗಳ ಬಾಗಿಲನ್ನು ತೆರೆಯುವಲ್ಲಿ ಬಹಳಷ್ಟು ಶ್ರಮಿಸಿದ್ದಾರೆ.
ಪ್ರೊಫೆಸರ್ ಅನಂತ ಅವರು ಎಂಐಟಿ ಸಂಸ್ಥೆಯನ್ನು 1994ರಲ್ಲಿ ಸೇರಿದ್ದರು. ಚೆನ್ನೈ ಮೂಲದವರಾದ ಅವರು ಹೈಸ್ಕೂಲಿನಲ್ಲಿರುವಾಗಲೇ ಅಮೆರಿಕಕ್ಕೆ ಕುಟುಂಬದೊಂದಿಗೆ ವಲಸೆ ಬಂದಿದ್ದರು. ಅವರ ತಾಯಿ ಬಯೋಕೆಮಿಸ್ಟ್ ಹಾಗೂ ಫುಲ್‌ಬ್ರೈಟ್ ಸ್ಕಾಲರ್ ಆಗಿದ್ದರು. ಆಕೆ ಪ್ರಯೋಗಾಲಯದಲ್ಲಿ ಕೊಲ್ಲಾಜನ್ ಸಂಶೋಧನೆ ನಡೆಸುತ್ತಿರುವಾಗ ಆಕೆಯೊಂದಿಗೆ ಕಾಲ ಕಳೆಯುವುದು ಅನಂತ ಅವರಿಗೆ ಬಲು ಇಷ್ಟದ ವಿಷಯವಾಗಿತ್ತು.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸಾಯನ್ಸ್ ವಿಭಾಗದಲ್ಲಿ ಪದವಿ, ಸ್ನಾತ್ತಕೋತ್ತರ ಪದವಿ ಮತ್ತು ಡಾಕ್ಟೋರಲ್ ಪದವಿಯನ್ನು ಅನಂತ ಚಂದ್ರಕಸನ್ ಪಡೆದಿದ್ದರು. ಎಂಐಟಿಯ ಪದವಿ ಕೋರ್ಸಿಗೆ ಅವರಿಗೆ ಪ್ರವೇಶ ದೊರೆಯದ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಶಿಕ್ಷಣ ಪೂರೈಸಿದ್ದರು. ಆದರೆ ಈಗ ಅವರು ಅದೇ ಪ್ರತಿಷ್ಠಿತ ಎಂಐಟಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಲಿರುವುದು ಆಸಕ್ತಿದಾಯಕವಾಗಿದೆ.
ಮೆಸಚುಸೆಟ್ಸ್ ಇಲ್ಲಿನ ಬೆಲ್ಮೊಂಟ್ ಎಂಬಲ್ಲಿ ತಮ್ಮ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸವಾಗಿರುವ ಅನಂತ ಚಂದ್ರಕಸನ್ ಅವರ ಹಿರಿಯ ಮಗ ಈ ವರ್ಷ ಎಂಐಟಿಯಿಂದ ಪದವಿ ಪಡೆದಿದ್ದಾರೆ. ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಾದ ಎಸ್‌ಐಎ ಯುನಿವರ್ಸಿಟಿ ರಿಸರ್ಚರ್ ಪ್ರಶಸ್ತಿ, ಐಇಇಇ ಡೊನಾಲ್ಡ್ ಒ ಪಡೆರ್ಸನ್ ಪ್ರಶಸ್ತಿ, ಮುಂತಾದವುಗಳು ಅವರ ಪಾಲಿಗೆ ಒಲಿದು ಬಂದಿದೆ.







