ವಿದೇಶಿ ಫಂಡ್: ಸ್ವಯಂಸೇವಾ ಸಂಘಟನೆಗಳ ವಿರುದ್ಧ ಕೇಂದ್ರ ಕ್ರಮ

ಹೊಸದಿಲ್ಲಿ,ಜೂ. 24: ಕೇಂದ್ರ ಸರಕಾರದ ನಿರ್ದೇಶ ಪಾಲಿಸದ 1,900ರಷ್ಟು ಸ್ವಯಂಸೇವಾ ಸಂಸ್ಥೆಗಳ ವಿರುದ್ಧ ಗೃಹಸಚಿವಾಲಯ ಕ್ರಮಕೈಗೊಳ್ಳಲು ಹೊರಟಿದೆ. ವಿದೇಶಿ ಫಂಡ್‌ಗಳನ್ನು ನಿರ್ವಹಿಸುವ ಇವುಗಳಬ್ಯಾಂಕ್ ಖಾತೆಗಳನ್ನು ಕಾನೂನು ಪ್ರಕಾರಗೊಳಿಸುವ ಕೇಂದ್ರ ಗೃಹಸಚಿವಾಲಯದ ಸೂಚನೆಯನ್ನು ಪಾಲಿಸದ್ದಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ವಿದೇಶಿ ಫಂಡ್ ಸ್ವೀಕರಿಸುವ 2, 025 ಸಂಘಟನೆಗಳಿಗೆ ಜೂನ್ 7ರ ಒಳಗೆ ಬ್ಯಾಂಕ್ ಖಾತೆಗಳನ್ನು ಸರಿಪಡಿಸಲು ಕೇಂದ್ರ ಗೃಹಸಚಿವಾಲಯ ತಿಳಿಸಿತ್ತು. ಆದರೆ ಹೆಚ್ಚಿನ ಸಂಘಟನೆಗಳು ಸ್ಪಂದಿಸಿಲ್ಲ. ಇಂತಹ ಸಂಘಟನೆಗಳ ವಿರುದ್ಧ ಕೇಂದ್ರ ಕ್ರಮಕೈಗೊಳ್ಳುತ್ತಿದೆ.
ಸ್ವಯಂಸೇವಾ ಸಂಘಟನೆಗಳಿಗೆ ಕಳುಹಿಸಿದ ನೋಟಿಸ್‌ನಲ್ಲಿ ಬ್ಯಾಂಕ್ ಅಕೌಂಟ್‌ಗಳನ್ನು ಕೂಡಲೇ ಕಾನೂನು ಪ್ರಕಾರ ಕ್ರಮಬದ್ದ ಗೊಳಿಸಬೇಕು ಇಲ್ಲದಿದ್ದರೆ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಮಾತ್ರವಲ್ಲ ವಿದೇಶಿ ಫಂಡ್ ಸ್ವೀಕರಿಸುವ ಸ್ವಯಂಸೇವಾ ಸಂಘಟನೆಗಳು ಅವರ ಖಾತೆಗಳನ್ನು ತಪಾಸಣೆ ಮಾಡಬೇಕು. ಆಯವ್ಯಯದ ಲೆಕ್ಕವನ್ನುಸರಕಾರಕ್ಕೆ ತಿಳಿಸಬೇಕು ಎಂದು ಸೂಚಿಸಲಾಗಿತ್ತು. ಎಪ್ರಿಲ್ ಒಂದರಿಂದ ಮಾರ್ಚ್ 31ರವರೆಗಿನ ಆರ್ಥಿಕ ವರ್ಷದ ಲೆಕ್ಕವನ್ನು ನೀಡಬೇಕಾಗಿತ್ತು.





