ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಮಾವೇಶ

ಮಂಗಳೂರು, ಜೂ.24: ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಶಿಕ್ಷಕ - ರಕ್ಷಕ ಸಂಘದ ವಾರ್ಷಿಕ ಸಮಾವೇಶವು ಇತ್ತೀಚೆಗೆ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಎಲ್.ಧರ್ಮ, ಇ0ದಿನ ಶಾಲಾ- ಕಾಲೇಜುಗಳು ಉತ್ತಮ ಇಂಜನಿಯರ್, ಅತ್ಯುತ್ತಮ ವೈದ್ಯರನ್ನು ಉತ್ಪಾದಿಸುವ ಕಾರ್ಖಾನೆಗಳಂತಾಗಿವೆ. ಆದರೆ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಪ್ರಯತ್ನಗಳು ಆಗುತ್ತಿಲ್ಲ. ಇಂದು ಧಾರ್ಮಿಕ ವಿಚಾರಗಳನ್ನು ಮೌಲ್ಯಗಳೆಂದು ಬಿಂಬಿಸಲಾಗುತ್ತದೆ. ಇದರಿಂದಾಗಿಯೇ ಸಮಾಜದಲ್ಲಿ ಅಸಹನೆ, ದ್ವೇಷ, ಅಶಾಂತಿಯ ವಾತಾವರಣ ಹೆಚ್ಚಾಗುತ್ತದೆ. ಆದುದರಿಂದ ಮಾನವೀಯ ಮೌಲ್ಯಗಳಾದ ಸಹನೆ, ಪರಸ್ಪರ ಗೌರವ, ಪ್ರೀತಿ, ಸಹೋದರತೆ ಮುಂತಾದವುಗಳನ್ನು ವಿದ್ಯಾರ್ಥಿಗಳಿಗೆ ಭೋದಿಸುವ ಹಾಗೂ ಅತ್ಯುತ್ತಮ ಭಾರತೀಯ ಪ್ರಜೆಗಳಾಗಿ ನಿರ್ಮಿಸುವ ಕರ್ತವ್ಯ ಪೋಷಕರು, ಶಿಕ್ಷಕರು ಹಾಗೂ ಶಾಲೆಗಳಿಗಿದೆ ಎಂದರು.
ಶಾಲಾ ಪ್ರಾಂಶುಪಾಲ ರೆ. ಫಾ.ರೋಬರ್ಟ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿ.ಬಿ.ಎಸ್.ಇ. 10 ಮತ್ತು 12ನೆ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ರೋಶ್ನಿ ಶೆಟ್ಟಿ ಹಾಗೂ ಇವಾ ಜೆಸ್ಸಿಕಾ ಡಿಸೋಜ ಶಾಲೆಯಲ್ಲಿ ನೀಡಿದ ಮಾರ್ಗದರ್ಶನದಿಂದ ಪಡೆದ ಅನುಭವವನ್ನು ಸಭಿಕರೊಂದಿಗೆ ಹಂಚಿಕೊಂಡರು. ಶಾಲಾ ಸಂಚಾಲಕ ರೆ. ಫಾ.ವಿಲ್ಸನ್ ವೈಟಸ್ ಡಿಸೋಜ ಮಾತನಾಡಿದರು. ಶಿಕ್ಷಕ -ರಕ್ಷಕ ಸಂಘದ ಉಪಾಧ್ಯಕ್ಷ ಡಾ.ವಾಸುದೇವ ಪೈ ಉಪಸ್ಥಿತರಿದ್ದರು.
ಲಿನೆಟ್ ಡಿಸೋಜ, ಶೈಲ ಪಿರೇರ, ಶರ್ಮಿಳಾ ಕೊಲಾಸೊ ಸನ್ಮಾನಿತ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಡಿಲ್ಲಾ ಕೊಲಸೊ ಕಾರ್ಯಕ್ರಮ ನಿರ್ವಹಿಸಿದರು. ದೀಪಾ ಡಿಸೋಜ ಮತ್ತು ಶ್ರೀಲತಾ ಕಾರ್ಯಕ್ರಮ ಸಂಯೋಜಿಸಿದರು.
ಅನಿತಾ ಥೋಮಸ್, ರೋಶನಿ ಜೋಸ್, ಮೇರಿ ಡಿಸೋಜ, ಐವನ್ ಮಸ್ಕರೇನ್ಹಸ್, ಹೆನ್ರಿ ಮಸ್ಕರೇನ್ಹಸ್, ನಂದಿನಿ ಸಹಕರಿಸಿದ್ದರು. ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ವಂದಿಸಿದರು.







