ಹಿದಾಯ ಫೌಂಡೇಶನ್ ವತಿಯಿಂದ ಕಾವಳಕಟ್ಟೆಯಲ್ಲಿ ವಿಶೇಷ ಇಫ್ತಾರ್ ಕೂಟ

ಬಂಟ್ವಾಳ, ಜೂ. 24: ಪರಸ್ಪರ ಮನುಷ್ಯನನ್ನು ಪ್ರೀತಿಸುವವನು ಮಾತ್ರ ದೇವರನ್ನು ಪ್ರೀತಿಸುತ್ತಾನೆ. ಮಾನವ ದ್ವೇಷಿ ದೇವರಿಗೂ ದ್ವೇಷಿಯಾಗಿದ್ದಾನೆ. ನಾವೆಲ್ಲರೂ ಪರಸ್ಪರ ಮಾನವೀಯತೆ, ಸಹೋದರತೆಯ ವಿಶಾಲ ತಳಹದಿಯ ಮೇಲೆ ಮಾನವ ಸಮಾಜವನ್ನು ಕಟ್ಟಬೇಕಾಗಿದೆ ಎಂದು ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖಾ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು.
ಹಿದಾಯ ಫೌಂಡೇಶನ್ ಮಂಗಳೂರು ಮತ್ತು ಜುಬೈಲ್ ಘಟಕದ ವತಿಯಿಂದ ಕಾವಳಕಟ್ಟೆಯ ಹಿದಾಯ ಶೇರ್ ಮತ್ತು ಕೇರ್ ಕಾಲಾನಿಯ ಕುಟುಂಬಸ್ಥರು ಹಾಗೂ ಭಿನ್ನಸಾಮರ್ಥ್ಯದ ಮಕ್ಕಳೊಂದಿಗೆ ನಡೆದ ಬೃಹತ್ ಇಫ್ತಾರ್ ಕೂಟದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅವರು ಮಾತಾನಾಡಿದರು.
ಕಾರ್ಯಕ್ರಮದಲ್ಲಿ ರಮಝಾನ್ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡಮಿಯ ಉಪನ್ಯಾಸಕ ಅನೀಸ್ ಕೌಸರಿ, ಪವಿತ್ರ ಕುರ್‌ಆನ್ ಸಕಲ ಮಾನವರಿಗೆ ಅವತೀರ್ಣಗೊಂಡ ಗ್ರಂಥವಾಗಿದ್ದು ಮಾನವ ಸಹೋದರತೆ ಹಾಗೂ ವೈಯುಕ್ತಿಕ ಪರಿಶುದ್ಧತೆಯನ್ನು ಎತ್ತಿಹಿಡಿಯುವ ಗ್ರಂಥವಾಗಿದೆ. ಸಾಮಾಜಿಕ ಸೇವೆಗೆ, ಬಡವರ, ದುರ್ಬಲರ ಏಳಿಗೆಗೆ ಆತ್ಮಸಾಕ್ಷಿಯಾಗಿ ದುಡಿಯುವುದು ಧರ್ಮದ ಪ್ರೇರಣೆಯಾಗಿದೆ. ಒಳಿತಿನ ಕಾರ್ಯಗಳಿಗೆ ರಮಝಾನ್ ಒಂದು ಸ್ಫೂರ್ತಿಯ ತಿಂಗಳೆಂದು ಹೇಳಿದರು.
ಹಿದಾಯ ಫೌಂಡೇಶನ್ ಅಧ್ಯಕ್ಷ ಝಕಾರಿಯ ಜೋಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜುಬೈಲ್ ಘಟಕದ ಅಧ್ಯಕ್ಷ ಶರೀಫ್ ಜೋಕಟ್ಟೆ, ಕತರ್ ಘಟಕದ ಅಧ್ಯಕ್ಷ ಅಬ್ದುಲ್ಲಾ ಮೋನು, ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ ಜೈನ್, ಬಂಟ್ವಾಳ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕಾವಳಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಶೇಕ್ ರಹ್ಮತುಲ್ಲಾ, ಸಂಸ್ಥೆಯ ಆಡಳಿತಾಧಿಕಾರಿ ಆಬಿದ್ ಅಸ್ಗರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿದಾಯ ಫೌಂಡೇಶನ್ ಕೇಂದ್ರಿಯ ಘಟಕದ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಸ್ವಾಗತಿಸಿದರು. ಸ್ಥಾಪಕ ಅಧ್ಯಕ್ಷ ಖಾಸೀಂ ಅಹ್ಮದ್ ಎಚ್.ಕೆ. ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಸದಸ್ಯ ಕೆ.ಎಸ್. ಅಬೂಬಕ್ಕರ್ ಧನ್ಯವಾದ ನೀಡಿದರು. ಅಬ್ದುಲ್ ಹಮೀದ್ ಜಿ. ಕಾರ್ಯಕ್ರಮ ನಿರೂಪಿಸಿದರು.







