ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ ಕುರಿತು ಕಾರ್ಯಾಗಾರ

ಮಂಗಳೂರು, ಜೂ.24: ತಾಯಿ ಹಾಗೂ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ 83 ಖಾಸಗಿ ಆಸ್ಪತ್ರೆ ಹಾಗೂ 8 ವೈದ್ಯಕೀಯ ಮಹಾವಿದ್ಯಾಲಯಗಳಿಗೆ ವೆನ್ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಿತು.
ತರಬೇತಿಗೆ ಸುಮಾರು 120ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಯ ಹಾಗೂ 8 ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಾಧಿಕಾರಿಗಳು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಇನ್ನಿತರ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆಯಲ್ಲಿ ಖಾಸಗಿ ಆಸ್ಪತ್ರೆಗಳು ಯಾವ ರೀತಿ ಸೇವೆಗಳ ಮಾಹಿತಿಯನ್ನು ನೀಡಬೇಕು ಎಂಬುದರ ಬಗ್ಗೆ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಅಶೋಕ್ ಎಚ್. ಹೇಳಿದರು.
ಕಳೆದ 3 ವರ್ಷದ ವರದಿಯನ್ನು ಪರಿಶೀಲಿಸಿದಾಗ ಶೇ.70 ಹೆರಿಗೆ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಶೇ.30 ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಗಾರ ಏರ್ಪಡಿಸಲಾಗಿದೆ ಎಂದು ಡಾ. ಅಶೋಕ್ ಎಚ್. ತಿಳಿಸಿದರು. ಹೆರಿಗೆ ಕೋಣೆಯಲ್ಲಿರಬೇಕಾದ ಸೌಲಭ್ಯ, ಸಲಕರಣೆ ಹಾಗೂ ವಿವಿಧ ಔಷಧಿ ಕಿಟ್‌ಗಳ ಬಗ್ಗೆ, ಶಸ್ತ್ರ ಚಿಕಿತ್ಸೆ ನಡೆಯುವ ಆಪರೇಷನ್ ಥಿಯೇಟರ್, ತಾಜ್ಯ ವಿಲೇವಾರಿ ಬಗ್ಗೆ ಹಾಗೂ ಚುಚ್ಚುಮದ್ದು ಬಗ್ಗೆ ಡಾ. ಅಶೋಕ್ ಎಚ್. ತಿಳಿಸಿದರು. ಎಂ.ಟಿ.ಪಿ ಹಾಗೂ ವಿವಿಧ ನಮೂನೆಗಳ ಬಗ್ಗೆ ಜಿಲ್ಲಾ ಶುಶ್ರೂಷಣಾಧಿಕಾರಿ ಲಿಸ್ಸಿ ಕೆ. ತಿಳಿಸಿದರು. ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ ಬಗ್ಗೆ ಜಿಲ್ಲಾ ಎಂಇ ವ್ಯವಸ್ಥಾಪಕರು ಬೃಂದಾ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯವಸ್ಥಾಪಕ ಮುಹಮ್ಮದ್ ಅಶ್ರಫ್, ನಗರ ಕಾರ್ಯಕ್ರಮ ವ್ಯವಸ್ಥಾಪಕ ಶುೃತಿ ಕೋಟ್ಯಾನ್, ಜಿಲ್ಲಾ ಲೆಕ್ಕ ವ್ಯವಸ್ಥಾಪಕ ಮುಹಮ್ಮದ್ ಯಾಸರ್ ಉಪಸ್ಥಿತರಿದ್ದರು.







