ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ
ಮಂಗಳೂರು, ಜೂ.24: ವಿದ್ಯಾಕೇಂದ್ರಗಳಲ್ಲಿ ಅಧ್ಯಾಪಕರ ಪುಸ್ತಕ ಪ್ರೀತಿ ಹಾಗೂ ವಿದ್ಯಾರ್ಥಿಗಳ ಜ್ಞಾನದಾಹ ಒಬ್ಬ ವ್ಯಕ್ತಿಯ ಉನ್ನತಿಗೆ ಸಹಕಾರಿಯಾಗಲಿದೆ. ಹಾಗೂ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಂಡಲ್ಲಿ ಈ ಕೆಲಸ ಇನ್ನಷ್ಟು ಸುಲಭ ಎಂದು ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಕಾರ್‌ಸ್ಟ್ರೀಟ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿ ನಿರ್ದೇಶಕ ಪ್ರೊ. ಎಚ್. ಉದಯಶಂಕರ್ ಶುಭಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಎಂ.ಜಿ.ಎಂ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಜಯಪ್ರಕಾಶ್ ಮಾನಕುಳಿ ಭಾಗವಹಿಸಿದ್ದರು. ಮಂಗಳೂರಿನ ಎ.ಪಿ.ಡಿ ಪ್ರತಿಷ್ಠಾನದ ಸ್ವಚ್ಛ ಭಾರತ ವಿಭಾಗದ ಸಂಯೋಜನಾಧಿಕಾರಿ ನವೀನ್ ಡಿಸೋಜ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸ್ಥಾಪಕ ಅಬ್ದುಲ್ಲಾ ಎ. ರಹ್ಮಾನ್, ಯೋಜನಾ ವಿಭಾಗದ ನಿರ್ದೇಶಕಿ ನೇಹಾ ಶೆಣೈ, ಶೈಕ್ಷಣಿಕ ಸಲಹೆಗಾರ ಡಾ. ಶಿವರಾಮ ಪಿ, ಸ್ನಾತಕೋತ್ತರ ಸಂಯೋಜಕ ಡಾ. ಪ್ರಕಾಶಚಂದ್ರ ಬಿ, ವಿದ್ಯಾರ್ಥಿ ಕ್ಷೇಮಪಾಲಕ ರವಿಕುಮಾರ ಎಂ.ಪಿ ಉಪಸ್ಥಿತರಿದ್ದರು. ಡಾ. ನವೀನ್ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಸಂದೇಶ್ ಹಾಗೂ ಗೀತೇಶ್ ಮಡ್ಯಾರು ನಿರ್ದೇಶನದ ‘ಮಸ್ಕಿರಿ’ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.







