ಮೂಳೂರು ಮರ್ಕಝ್‌ನಲ್ಲಿ ಸೌಹಾರ್ದ ಇಫ್ತಾರ್ ಕೂಟ

ಉಡುಪಿ, ಜೂ.24: ಯುವಕರು ಶಾಂತಿಯ ಮೂಲಕ ಇಸ್ಲಾಮಿನ ತತ್ವಾದರ್ಶಗಳನ್ನು ಪಾಲಿಸಿ ಈ ಸಮುದಾಯದ ಶಾಂತಿಯ ವಾಹಕರಾಗಬೇಕು. ಅವರು ಸ್ವಂತ ತೀರ್ಮಾನಗಳನ್ನು ಮಾಡುವಾಗ ಹಿರಿಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕು. ಮಾದಕ ದ್ರವ್ಯದ ಚಟಕ್ಕೆ ಬಲಿಯಾಗುತ್ತಿರುವ ಯುವ ಸಮುದಾಯವನ್ನು ಸರಿದಾರಿಗೆ ತರುವುದು ನಮ್ಮ ಮೊದಲ ಆಧ್ಯತೆಯಾಗಬೇಕು ಎಂದು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಹಾಗೂ ಮೂಳೂರು ಅಲ್ ಇಹ್ಸಾನ್ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಲ್‌ಹಾಜ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಹೇಳಿದ್ದಾರೆ.
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರಿನ ಅಧೀನ ಸಂಸ್ಥೆ ಮೂಳೂರು ಮರ್ಕಝ್ ತಅಲೀಮಿಲ್ ಇಹ್ಸಾನ್‌ನಲ್ಲಿ ಇತ್ತೀಚೆಗೆ ನಡೆದ ರಮಳಾನ್ ಪ್ರಭಾಷಣದಲ್ಲಿ ಇಸ್ಲಾಮಿನಲ್ಲಿ ಯುವಕರ ಪಾತ್ರ ಎಂಬ ವಿಷಯದಲ್ಲಿ ಅವರು ಮಾತನಾಡುತಿ ದ್ದರು.
ಮಹಿಳಾ ಆಲಿಮತ್ತಿನಿಂದ ಮಹಿಳೆಯರಿಗಾಗಿ ತರಗತಿ ನಡೆಯಿತು. ನಂತರ ನಡೆದ ರಮಳಾನ್ ಪ್ರಭಾಷಣವನ್ನು ಮೂಳೂರು ಸಹಾಯಕ ಮುದರ್ರಿಸ್ ಹೈದರಲಿ ಅಹ್ಸನಿ ಉದ್ಘಾಟಿಸಿದರು. ಸಂಜೆ ನಡೆದ ಜಲಾಲಿಯಾ ಮಜ್ಲಿಸಿಗೆ ಕುಂಬೋಲ್ ಜಾಪರ್ ಸ್ವಾದಿಕ್ ತಂಙಳ್ ನೇತೃತ್ವದಲ್ಲಿ ನೀಡಿದರು. ನಂತರ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ. ರಾಷ್ಟ್ರೀಯ ಸಮಿತಿ ವತಿಯಿಂದ ಸಂಸ್ಥೆಯ ಅನಾಥ ಹಾಗೂ ನಿರ್ಗತಿಕ ಮಕ್ಕಳು ಮತ್ತು ಕುಂಬೋಲ್ ಸಾದಾತ್‌ಗಳ ಸಾನಿಧ್ಯದಲ್ಲಿ ಸಾಮೂಹಿಕ ಇಫ್ತಾರ್ ಕೂಟ ನಡೆಯಿತು.
ಕಾಪು ಶಾಸಕ ವಿನಯಕುಮಾರ್ ಸೊರಕೆ, ಬೆಳಪು ಗ್ರಾಪಂ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಡಿಕೆಎಸ್ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಇಸ್ಮಾಯಿಲ್ ಕಿನ್ಯ, ಡಿಕೆಯಸಿ ಸದಸ್ಯರಾದ ಶೈಖ್ ಬಳ್ಕುಂಜೆ, ಶಂಶುದ್ದೀನ್ ಬಳ್ಕುಂಜೆ, ಇ.ಕೆ.ಇಬ್ರಾಹಿಂ ಕಿನ್ಯ, ಅಬ್ದುಲ್ ಸಲೀಂ ವಿಟ್ಲ, ಹಾಜಿ ಮುಹಮ್ಮದ್ ಮೇದರಬೆಟ್ಟು, ಮರ್ಕಝ್ ಆಡಳಿತ ಸಮಿತಿ ಉಪಾಧ್ಯಕ್ಷರಾದ ಬದ್ರುದ್ಧೀನ್ ಬಜ್ಪೆ, ಎಂ.ಎಚ್.ಬಿ.ಮುಹಮ್ಮದ್, ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ, ಸದಸ್ಯರಾದ ವಿ.ಮುಹಮ್ಮದ್ ಬಜ್ಪೆ, ಅಜಬ್ಬ ಅಭಿಮಾನ್, ವೈ.ಅಹ್ಮದ್ ಹಾಜಿ, ಮನ್ಹರ್ ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು. ಮ್ಯಾನೇಜರ್ ಮುಸ್ತಫಾ ಸಅದಿ ಸ್ವಾಗತಿಸಿ ವಂದಿಸಿದರು.