ದುಶ್ಚಟಗಳಿಗೆ ಬಲಿಯಾಗದೆ ಜ್ಞಾನ ಸಂಪಾದಿಸಿ: ನ್ಯಾ.ಲತಾ

ಉಡುಪಿ, ಜೂ.24: ಶಾಲಾ ಜೀವನದಲ್ಲಿ ಮಕ್ಕಳು ದುಶ್ಚಟಗಳಿಗೆ ಬಲಿಯಾ ಗದೇ ಜ್ಞಾನವನ್ನು ಸಂಪಾದಿಸುವ ನಿಟ್ಟಿನಲ್ಲಿ ಕಠಿನ ಪರಿಶ್ರಮದೊಂದಿಗೆ, ಶಿಸ್ತಿನ ಜೀವನ ನಿರ್ವಹಿಸಿದರೆ ಭವಿಷ್ಯದಲ್ಲಿ ಯಶಸ್ಸು ಸಾಧ್ಯ ಎಂದು ಉಡುಪಿ ಹಿರಿಯ ಸಿವಿಲ್ ನ್ಯಾಯಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಹೇಳಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಭಿಯೋಜನ ಇಲಾಖೆ, ಪೋಲೀಸ್ ಇಲಾಖೆ ಮತ್ತು ಉದ್ಯಾವರ ಎಂಇಟಿ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಎಂ.ಇ.ಟಿ.ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ಪೋಕ್ಸೊ ಕಾಯಿದೆ ಕುರಿತು, ಉಡುಪಿ ಮಹಿಳಾ ಠಾಣೆಯ ಸಹಾಯಕ ಉಪನಿರೀಕ್ಷಕಿ ಮುಕ್ತ ಬಾ, ಮಾದಕ ವಸ್ತುಗಳು, ಬಾಲ್ಯ ವಿವಾಹ, ರ್ಯಾಗಿಂಗ್, ಬಾಲ ಕಾರ್ಮಿಕರು ಹಾಗೂ ಸಂಚಾರಿ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಸಂಚಾಲಕ ಖಲೀಲ್ ಅಹ್ಮದ್, ಪ್ರಾಂಶುಪಾಲೆ ಜುನೈದಾ ಸುಲ್ತಾನ್ ಉಪಸ್ಥಿತರಿದ್ದರು. ಶಿಕ್ಷಕಿ ರೆಮಿ ಎಡ್ವಿನ್ ಸ್ವಾಗತಿಸಿದರು. ಶಾಲಾ ಆಪ್ತ ಸಮಾ ಲೋಚಕಿ ಪ್ರವಲ್ಲಿಕಾ ಭಟ್ ವಂದಿಸಿದರು.





