ಮಿಶೆಲ್ ಫೂಕೋ
ತೆಳು ಚಿಂತನೆ ಕದಡುವ ತತ್ವಜ್ಞಾನಿ

20ನೆ ಶತಮಾನದ ಜನಪ್ರಿಯ ಪ್ರಭಾವಿ ಚಿಂತಕರಲ್ಲಿ ಒಬ್ಬರಾದ ಫೊಕೋ ಫ್ರಾನ್ಸ್ ದೇಶದಲ್ಲಿ ಅಕ್ಟೋಬರ್ 15, 1926ರಂದು ಜನಿಸಿದರು. ಇವರ ತಂದೆ ಶ್ರೀಮಂತ ವೈದ್ಯರಾಗಿದ್ದರು. ಕ್ಯಾಥೊಲಿಕ್ ಪಂಗಡಕ್ಕೆ ಇಷ್ಟವಾಗಿದ್ದ ಫೊಕೋ ಬಾಲ್ಯದಲ್ಲಿ ಚರ್ಚಿನ ಸಂಗೀತ ನುಡಿಸುವ ಗುಂಪಿನ ಹುಡುಗ ರಲ್ಲಿ ಒಬ್ಬರಾಗಿದ್ದರು. ತಾಯಿ ಮತ್ತು ತಂಗಿಯ ಜೊತೆಗೆ ತಂದೆಗಿಂತ ಹೆಚ್ಚು ಆತ್ಮೀಯ ಸಂಬಂಧ ಹೊಂದಿದ್ದರು. ತನ್ನ ಶಿಕ್ಷಣದ ಅವಧಿ ಯಲ್ಲಿ ಫ್ರೆಂಚ್, ಇತಿಹಾಸ, ಗ್ರೀಕ್ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಹತೋಟಿ ಪಡೆದಿದ್ದರು. 1943ರಲ್ಲಿ ಪ್ಯಾರಿಸ್‌ನ ಸುಪ್ರಸಿದ್ಧ ಇಕೋಲೆ ನಾರ್ಮಲ್ ಸುಪೀರಿಯರ್ ಕಾಲೇಜಿಗೆ ಸೇರಿಕೊಂಡರು. ಆ ಕಾಲೇಜಿನಲ್ಲಿ ತತ್ವಜ್ಞಾನಿಯೊಬ್ಬರ ಪ್ರಭಾವಕ್ಕೆ ಒಳಗಾಗಿ ಹೆಗೆಲ್‌ರವರ ತತ್ವಶಾಸ್ತ್ರವನ್ನು ಅಭ್ಯಾಸ ಮಾಡಿದರು. ಆಗ ಫೊಕೋರವರಿಗೆ ಇತಿಹಾಸ ಮತ್ತು ತತ್ವಶಾಸ್ತ್ರಕ್ಕೆ ಇರುವ ಆಳವಾದ ಸಂಬಂಧ ಅರ್ಥ ವಾಯಿತು. ಟೀಪೋ ಲೈಟ್‌ರವರು ತತ್ವಶಾಸ್ತ್ರದ ಮೂಲಕ ಇತಿಹಾಸ ವನ್ನು ವಿವರಿಸುವ ಕಲೆಯನ್ನು ಫೊಕೋರವರಿಗೆ ಕರಗತ ಮಾಡಿ ಕೊಟ್ಟರು. ಹೆಗೆಲ್‌ರವರು ಯಾವುದು ವಾಸ್ತವವೋ ಅದನ್ನು ತರ್ಕಬದ್ಧ ಹಾಗೂ ವೈಚಾರಿಕವಾದುದು ಎಂದು ನಂಬಿದ್ದರು. ಅವರ ಪ್ರಕಾರ ವಿಚಾರ ಅಥವಾ ಪ್ರಜ್ಞೆಯೇ ಇತಿಹಾಸ ಅಥವಾ ಮಾನವನನ್ನು ಮುನ್ನಡೆಸುವ ಶಕ್ತಿಯಾಗಿದ್ದಿತು.
ಈ ಸಂದರ್ಭದಲ್ಲಿ ಫೊಕೋ ಮಾರ್ಕ್ಸ್‌ವಾದದ ಜೊತೆಗೆ ಹೆಗೆಲ್‌ನ ತತ್ವಜ್ಞಾನವನ್ನು ಅರ್ಥೈಸಿಕೊಂಡರು. ಹೀಗೆ ಅರ್ಥೈಸಿಕೊಳ್ಳುವಾಗ ಮಾರ್ಕ್ಸ್‌ವಾದದ ಪ್ರಮುಖ ಅಂಶವಾದ ಕಾರ್ಯಕಾರಣ ಸಂಬಂಧದ ಪರಿಕಲ್ಪನೆಯನ್ನು ಅನುಮಾನದ ದೃಷ್ಟಿಯಿಂದ ಪರಿಶೀಲಿ ಸತೊಡಗಿದರು. ಫೊಕೋ ಪ್ಯಾರಿಸ್‌ನ ಇಎನ್‌ಎಸ್ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ ಖಿನ್ನತೆಗೆ ಒಳಗಾದರು. ಯಾರ ಜೊತೆ ಯೂ ಬೆರೆಯುತ್ತಿರಲಿಲ್ಲ. ಯಾವುದಾದರೂ ವಿಚಾರ ಬಂದಾಗ ತೀವ್ರ ವಾಗ್ವಾದದಲ್ಲಿ ತೊಡಗುತ್ತಿದ್ದರು. ಇದರಿಂದಾಗಿ ಫೊಕೋರನ್ನು ಸ್ನೇಹಿತರು ದ್ವೇಷಿಸತೊಡಗಿದರು. ಅವರಿಗೆ ಹುಚ್ಚನ ಪಟ್ಟ ಕೂಡ ಕಟ್ಟಲಾಯಿತು. ಆತ್ಮಹತ್ಯೆಗೆ ಪ್ರಯತ್ನಿಸಿದ ಫೊಕೋ ಚಾಕುವಿನಿಂದ ತನ್ನ ಎದೆಯನ್ನು ಇರಿದುಕೊಂಡರು. ನಿದ್ರೆಯ ಮಾತ್ರೆಗಳನ್ನು ನುಂಗಿ ಸಾಯಲು ಪ್ರಯತ್ನಿಸಿದ್ದರು.
ಈ ಸಂದರ್ಭದಲ್ಲಿ ಮೊತ್ತಮೊದಲ ಬಾರಿಗೆ ಫೊಕೋರವರಿಗೆ ಮನೋಚಿಕಿತ್ಸೆಯನ್ನು ನೀಡಲಾಯಿತು. ಆಗ ಅವರಿಗೆ ಮನಃಶಾಸ್ತ್ರದ ಪರಿಚಯವಾಯಿತು. ಇದು ಮುಂದಿನ ಅಧ್ಯಯನಗಳಿಗೆ ಸಹಕಾರಿಯಾಯಿತು. ಈ ವಯಸ್ಸಿನಲ್ಲಿ ಅವರ ಬುದ್ಧಿ ಮತ್ತು ಹರಿತ ವಾದ ಮುಖಲಕ್ಷಣ ಗುರುತಿಸಿ ಅವರನ್ನು ‘ನರಿ’ ಎಂದು ಕರೆಯು ತ್ತಿದ್ದರು. ಪುರುಷರಿಗೆ ಆಕರ್ಷಿತವಾದ ಫೊಕೋ ತನ್ನ ಆಕರ್ಷಣೆ ಯನ್ನು ಬಹಿರಂಗವಾಗಿ ವ್ಯಕ್ತಪಡಿಸುವಂತಿರಲಿಲ್ಲ. ಏಕೆಂದರೆ, ಶಾಸನಬದ್ಧವಾಗಿ ಪುರುಷ ಪುರುಷರ ನಡುವಿನ ಸಂಬಂಧ ಅಥವಾ ಸ್ತ್ರೀ ಸ್ತ್ರೀಯರ ನಡುವಿನ ಸಂಬಂಧವನ್ನು ಫ್ರಾನ್ಸ್‌ನಲ್ಲಿ ನಿಷೇಧಿಸಲಾ ಗಿತ್ತು. ಈ ವಿಚಾರಗಳು ಫೊಕೋರಲ್ಲಿ ಕುತೂಹಲವನ್ನು ತರಿಸಿದವು. ಮನುಷ್ಯನ ಲೈಂಗಿಕತೆಯನ್ನು ದಮನ ಮಾಡುವ ಸಾಮಾಜಿಕ ಕಟ್ಟುಪಾಡುಗಳನ್ನು ಕುರಿತು ಸಂಶೋಧನೆ ಮಾಡಲು ಪ್ರೇರೇಪಿಸಿದವು.
1950ರಲ್ಲಿ ಫೊಕೋರವರು ಕಮ್ಯು ನಿಸ್ಟ್ ಪಾರ್ಟಿಯ ಸದಸ್ಯರಾದರು. ಈ ಪಾರ್ಟಿಗೆ ಲೂಯಿಸ್ ಅಲ್ಥೂಸರ್ ನಾಯಕರಾಗಿದ್ದರು. ಫೊಕೋ ಸದಸ್ಯ ರಾಗಿದ್ದರೂ ಸಹ ಪಾರ್ಟಿಯ ಸಭೆ ಗಳಿಗೆ ನಿಯಮಿತವಾಗಿ ಹಾಜರಾಗು ತ್ತಿರಲಿಲ್ಲ. ಬದಲಾಗಿ ಪಾರ್ಟಿಯ ಕೆಲ ವು ಸಿದ್ಧಾಂತಗಳನ್ನು ಟೀಕಿಸುತ್ತಿದ್ದರು.
ಫೊಕೋರವರು ಯಾವುದೇ ಒಂದು ನಿರ್ದಿಷ್ಟವಾದ ಕ್ಷೇತ್ರಕ್ಕೆ ತಮ್ಮ ಚಿಂತನೆ ಯನ್ನು ಸೀಮಿತಪ ಡಿಸಿಕೊಳ್ಳಲಿಲ್ಲ. ತಮ್ಮ ಅರಿವಿಗೆ ಬರುವ ಪ್ರತಿಯೊಂದು ವಿಚಾರವನ್ನೂ ಆಳವಾಗಿ ಪರಿಶೀಲಿಸುತ್ತಿದ್ದರು. ಅಷ್ಟುಮಾತ್ರವಲ್ಲದೆ ಜನಪ್ರಿಯ ಅಧ್ಯಾಪಕರಾಗಿದ್ದರು. ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡತೊಡಗಿ ದಾಗ ಅವರ ಜನಪ್ರಿಯತೆ ಮುಗಿಲುಮುಟ್ಟಿತು. ಅವರು ಉಪನ್ಯಾಸ ನೀಡುತ್ತಿದ್ದ ಸಭಾಂಗಣದ ಹೊರಗೆ ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಅವರ ಹೇಳಿಕೆ, ಸಂದೇಶಗಳ ಈ ವಿವರಗಳು ಫೊಕೋರವರ ಮಹತ್ವವನ್ನು ತಿಳಿಸುತ್ತವೆ. ವೈಯಕ್ತಿಕ ಬದುಕಿನಲ್ಲಿಯೇ ಫೊಕೋ ಕೆಲವೊಮ್ಮೆ ಅತಿರೇಕದ ಪ್ರಯೋಗಗಳಿಗೆ ತಮ್ಮ ದೇಹವನ್ನು ಒಡ್ಡಿಕೊಂಡರು. ಸಲಿಂಗಕಾಮ, ಅತಿಯಾದ ಮಾದಕ ವಸ್ತುಗಳ ಬಳಕೆ, ವೇಶ್ಯಾ ಗೃಹಗಳಿಗೆ ಭೇಟಿ, ಫೊಕೋರವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದವು. ಯಾವುದನ್ನು ಸಮಾಜ ಸಹಜ ಎಂದು ಕರೆಯುತ್ತಿತ್ತೋ ಅಥವಾ ಅಸಹಜ ಎಂದು ಕರೆಯುತ್ತಿತ್ತೋ ಅವೆಲ್ಲವನ್ನೂ ಅವರು ಗಾಢ ಪರೀಕ್ಷೆಗೆ ಒಡ್ಡುತ್ತಿದ್ದರು.
ಯುರೋಪಿನ ಚರಿತ್ರೆ ಅಥವಾ ತತ್ವಶಾಸ್ತ್ರ ಪರಂಪರೆಯ ಗಾಢವಾದ ವಿದ್ಯಾರ್ಥಿ ಯಾಗಿದ್ದ ಫೊಕೋರವರು ತನ್ನ ಸಮಕಾಲೀನ ಪಾಶ್ಚಾತ್ಯ ಸಮಾಜ ಎದುರಿಸುತ್ತಿದ್ದ ದೈನಂದಿನ ಬದುಕಿನ ಸವಾಲುಗಳನ್ನು, ತಾತ್ವಿಕ ಬಿಕ್ಕಟ್ಟನ್ನು ಗ್ರಹಿಸಲು ಪ್ರಯತ್ನಿಸಿದರು. ಇದು ಸಹಜವಾಗಿಯೇಅವರ ವಿಸ್ತೃತ ತಿಳುವಳಿಕೆಯನ್ನು ತೋರಿಸುತ್ತದೆ. ಅವರ ತಿಳುವಳಿಕೆ ಸಾರ್ವತ್ರಿಕ ವೌಲ್ಯವನ್ನು ಪಡೆದಿದೆ. ಹೀಗಾಗಿ ಅವರನ್ನು ಅಧ್ಯಯನ ಮಾಡುವುದೆಂದರೆ ಜಗತ್ತಿನ ತಾತ್ವಿಕ ಬಿಕ್ಕಟ್ಟು ಮತ್ತು ಮನುಷ್ಯನ ದೈನಂದಿನ ಬದುಕಿನ ಸವಾಲುಗಳನ್ನು ಕುರಿತು ಅಧ್ಯಯನ ಮಾಡು ವುದೇ ಆಗಿದೆ.
ಫೊಕೋರವರ ಪುಸ್ತಕ ಮ್ಯಾಡ್‌ನೆಸ್ ಆ್ಯಂಡ್ ಸಿವಿಲೈಝೇಷನ್ ಕೇವಲ ಹುಚ್ಚುತನದ ಚರಿತ್ರೆಯನ್ನು ಮಾತ್ರ ತಿಳಿಸುವುದಿಲ್ಲ ಅಥವಾ ಮನಃಶಾಸ್ತ್ರೀಯ ದೃಷ್ಟಿಯಿಂದ ಬರೆಯಲ್ಪಟ್ಟಿಲ್ಲ. ಏಕೆಂದರೆ, ಆಧುನಿಕ ವಿಜ್ಞಾನದ ತರ್ಕದ ಪ್ರಕಾರ ಹುಚ್ಚುತನ ಎನ್ನುವ ಸ್ಥಿತಿಯು ನಕಾರಾತ್ಮಕ ವಾದುದು. ಆದರೆ ಫೊಕೋ ಇದನ್ನು ಪ್ರಶ್ನಿಸು ತ್ತಾರೆ. ಅವರು ಹುಚ್ಚುತನವನ್ನೇ ಆಳವಾದ ಅಧ್ಯಯನಕ್ಕೆ ಒಳಪಡಿಸಿದರು. ಹುಚ್ಚುತನವನ್ನು ಯಾವ ಯಾವ ಕಾಲಘಟ್ಟದಲ್ಲಿ ಹೇಗೆ ನಿರೂಪಿಸಲಾ ಯಿತು ಎಂಬುದನ್ನು ದಾಖಲಿಸಿದರು. ಅವರ ಅಧ್ಯಯನವು ಮನಃಶಾಸ್ತ್ರದ ಮಿತಿಯನ್ನು ತೋರಿಸಿಕೊಟ್ಟಿತ್ತು.
ಹುಚ್ಚುತನ 17 ಮತ್ತು 18ನೆ ಶತಮಾನದಲ್ಲಿ ಯೂರೋಪಿನ ಸಾಮಾಜಿಕ ಜಗತ್ತಿನಲ್ಲಿ ಭಿನ್ನವಾಗಿ ಪರಿಗ ಣಿಸಲ್ಪಟ್ಟಿತ್ತು ಎಂದು ಫೊಕೋ ವಿಶ್ಲೇಷಿಸಿಸುತ್ತಾರೆ. ಮಧ್ಯಯುಗ ದಲ್ಲಿ ಹುಚ್ಚುತನವನ್ನು ದೇವರ ಇಚ್ಛೆ, ಜಗತ್ತಿನ ಪ್ರಳಯವಾಗುವ ಸೂಚನೆ ಮುಂತಾಗಿ ಭಾವಿಸಲಾಗುತ್ತಿತ್ತು. ಪುನರು ಜ್ಜೀವನ ಯುಗದಲ್ಲಿ ಅಂದರೆ ಹದಿನೈದನೆ ಶತಮಾನ ದಲ್ಲಿ ಹುಚ್ಚುತನವೆಂಬುದು ಮುಖ್ಯ ಅಂಶವಾಯಿತು. ತತ್ವಶಾಸ್ತ್ರ, ಸಾಹಿತ್ಯ, ಕಲೆಯಲ್ಲಿ ಹುಚ್ಚುತನವನ್ನು ಮನುಷ್ಯನ ಅಸ್ತಿತ್ವದಲ್ಲಿ ಗುರುತಿಸಲಾಯಿತು, ಹದಿ ನೇಳು ಮತ್ತು ಹದಿನೆಂಟನೆ ಶತಮಾನದಲ್ಲಿ ಆಧುನಿಕ ಕಾರ್ಯಕಾರಣ ಸಂಬಂಧದ ಪ್ರವೇಶವಾಗುತ್ತಿದ್ದಂತೆ ಹುಚ್ಚ ನ್ನು ತರ್ಕಬದ್ಧವಲ್ಲದ್ದು, ಸಮಾಜವು ಒಪ್ಪಲು ಸಾಧ್ಯವಿಲ್ಲದ ನಡವಳಿಕೆ ಎಂದು ಪರಿಗಣಿಸಲಾಗಿತ್ತು.
ಹುಚ್ಚರನ್ನು, ಹುಚ್ಚರೆಂದು ಪರಿಗಣಿಸಲ್ಪಟ್ಟವರನ್ನು ಕಳ್ಳರ ಜೊತೆ ಬಂಧಿಸಿ ಇಡಲಾಗುತ್ತಿತ್ತು. ಆ ಕಾಲದಲ್ಲಿ ಬಡತನ, ಭಿಕ್ಷಾಟನೆ, ಸೋಮಾರಿತನ ಮುಂತಾದ ಆರ್ಥಿಕ ಅಂಶಗಳು ಹುಚ್ಚುತನಕ್ಕೆ ಕಾರಣವಾಗಿದ್ದವು ಎಂಬುದನ್ನು ಫೊಕೋ ಗುರುತಿಸಿ ದ್ದಾರೆ. ಫ್ರಾನ್ಸ್‌ನಲ್ಲಿ ಹದಿನೇಳು ಮತ್ತು ಹದಿನೆಂಟನೆ ಶತಮಾನದಲ್ಲಿ ಭಿಕ್ಷುಕರನ್ನು ಬಾಣದಿಂದ ಹೊಡೆದು ಸಾಯಿಸ ಲಾಗುತ್ತಿತ್ತು. ಹುಚ್ಚರನ್ನು ಪ್ರಾಣಿಗಳಂತೆ ಪರಿಗಣಿಸಿ ಕಟ್ಟಿಹಾಕಲಾಗುತ್ತಿತ್ತು. ಹದಿನೆಂಟನೆ ಶತಮಾನದಲ್ಲಿ ವಿವಿಧ ಮನಃಶಾಸ್ತ್ರಜ್ಞರು ಇದನ್ನು ಗುರುತಿಸಿದರು ಹಾಗೂ ಮನಃಶಾಸ್ತ್ರೀಯ ಭಾಷೆಯಲ್ಲಿ ವಿವರಿ ಸತೊಡಗಿದರು. ತಣ್ಣೀರಿನಲ್ಲಿ ಅದ್ದುವುದು, ಸಂಗೀತ ಕೇಳಿಸುವುದು, ಚುಟಿಕೆ ಹಾಕುವುದು (ಬಳೆ ಚೂರಿನಿಂದ) ಮೊದಲಾದ ಚಿಕಿತ್ಸೆಗಳನ್ನು ನೀಡಲಾಗುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಹುಚ್ಚನ ಮನಸ್ಸಿನಲ್ಲಿ ಭಯ ಹುಟ್ಟಿಸುವುದರಿಂದ ಅವನನ್ನು ನಿಯಂತ್ರಣದಲ್ಲಿ ಇಡಬಹುದೆಂಬ ನಿರೂಪಣೆ ಹುಟ್ಟಿಕೊಂಡಿತು.
ಸಿಗ್ಮಂಡ್ ಫ್ರಾಯ್ಡಾರವರು ಮನಃಶಾಸ್ತ್ರೀಯವಾಗಿ ವಿವರಿಸದ ಮೇಲೆ ಹುಚ್ಚುತನಕ್ಕೆ ಹೊಸ ನಿರೂಪಣೆ ಸೇರಿಕೊಂಡಿತು.
ಅಂತಿಮವಾಗಿ ಪ್ರತಿ ನಿರೂಪಣೆಯೂ ಬಂಡವಾಳಶಾಹಿಗಳ ಅಧಿಕಾರದ ಮಾದರಿಯನ್ನು ಹುಚ್ಚರ ಮೇಲೆ ಹೇರುವ ಕ್ರಮವನ್ನು ಫೊಕೋ ವಿವರಿಸಿದರು. ಈ ನಿರೂಪಣೆಯಿಂದ ಮ್ಯಾಡ್‌ನೆಸ್ ಮತ್ತು ಸಿವಿಲೈಝೇಷನ್ ಆಕರ್ಷಿಸಿತು. ಈ ಕೃತಿಯಲ್ಲಿ ಒಟ್ಟಾರೆಯಾಗಿ ವಿವಿಧ ಕಾಲಘಟ್ಟದಲ್ಲಿ ಸಮಾಜವು ಹುಚ್ಚುತನವನ್ನು ಅಧಿಕಾರದ ಒಂದು ಆಯುಧವಾಗಿ ಬಳಸಿ ಜನರನ್ನು ದಮನ ಮಾಡಿದ್ದನ್ನು ಫೊಕೋ ವಿವರಿಸುತ್ತಾರೆ.
ಫೊಕೋರವರು ತಮ್ಮ ‘ಡಿಸಿಪ್ಲಿನ್ ಆ್ಯಂಡ್ ಪನಿಶ್‌ಮೆಂಟ್’ ಕೃತಿಯಲ್ಲಿ. ಮನುಷ್ಯನ ಮನಸ್ಸು ಮತ್ತು ದೇಹವು ಹೇಗೆ ರಾಜಕೀಯ, ವೈಜ್ಞಾನಿಕ ಮತ್ತು ನ್ಯಾಯಾಧೀಕರಣದ ಅಧಿಕಾರಕ್ಕೆ ಒಳಪಡುತ್ತದೆ ಎಂಬುದನ್ನು ಅನ್ವೇಷಿಸುತ್ತದೆ. ಫೊಕೋರವರ ಪ್ರಕಾರ ಯಾವುದೇ ಅಧಿಕಾರದ ಸಂಬಂಧವು ತಕ್ಷಣವೇ ಮನುಷ್ಯನ ದೇಹದ ಮೇಲೆ ಹತೋಟಿಯನ್ನು ಪಡೆಯುತ್ತದೆ. ಅದರ ಮೇಲೆ ಬಂಡವಾಳ ಹೂಡಲಾಗುತ್ತದೆ. ದೇಹವನ್ನು ಪಳಗಿಸಲಾಗುತ್ತದೆ, ತರಬೇತಿ ನೀಡಲಾಗುತ್ತದೆ ಹಾಗೂ ಗುರಿಯನ್ನು ಮುಟ್ಟಲು ಪ್ರೇರೇಪಿಸಲಾಗುತ್ತದೆ. ಇದನ್ನು ಮೈಕ್ರೋಫಿಸಿಕ್ಸ್ ಎಂದು ಕರೆಯಲಾಗುತ್ತದೆ. ಅಂದರೆ ಸೂಕ್ಷ್ಮವಾಗಿ ಪ್ರತಿಯೊಂದು ದೇಹದ ಮೇಲೆ ಅಧಿಕಾರವು ಚಲಾಯಿಸಲ್ಪಡುವ ಬಗೆಯನ್ನು ಫೊಕೋ ಅನ್ವೇಷಿಸುತ್ತಾರೆ. ಉದಾ: ಸಾಮಾಜಿಕ ಸಂಸ್ಥೆಗಳಾದ ಜೈಲು, ಫ್ಯಾಕ್ಟರಿ, ಆಸ್ಪತ್ರೆ, ಶಾಲೆ ಮೊದಲಾದವುಗಳನ್ನು ಜೈಲುಗಳೆಂದು ಪರಿಗಣಿಸುತ್ತಾರೆ. ಇಲ್ಲಿ ಮನುಷ್ಯನನ್ನು ಶಿಸ್ತಿಗೆ ಒಳಪಡಿಸಿ ಶಿಕ್ಷಿಸಲಾಗುತ್ತದೆ, ದೇಹವನ್ನು ಶಿಸ್ತಿಗೆ ಒಳಪಡಿಸಲಾಗುತ್ತದೆ, ದೇಹವನ್ನು ಶಿಸ್ತಿಗೆ ಒಳಪಡಿಸುವಾಗ ಯಂತ್ರಗಳಂತೆ ಪರಿಗಣಿಸಲಾಗುತ್ತದೆ.
ಉದಾ: ಸೈನಿಕರು ಒಂದೇ ರೀತಿಯಾಗಿ ನಡೆಯಲು ಪ್ರಯತ್ನಿಸುತ್ತಾರೆ. ಶಾಲಾ ಮಕ್ಕಳು ಸರಿಯಾಗಿ ಕುಳಿತುಕೊಳ್ಳುವುದು, ಬರೆಯುವುದು, ವೇಳಾಪಟ್ಟಿಯನ್ನು ಅನುಸರಿಸುವುದು ಮೊದಲಾದ ಶಿಸ್ತಿಗೆ ಒಳಪಟ್ಟು ಅದನ್ನು ಮೀರಿದರೆ ಶಿಕ್ಷೆಗೆ ಒಳಪಡುತ್ತಾರೆ. ಅಂದರೆ ಮಾನವನ ಮನಸ್ಸು ಅಥವಾ ಆತ್ಮ ಮರೆಯಾಗಿ ನಿರ್ಜೀವ ದೇಹವಾಗಿ ಉಳಿಯುತ್ತಾನೆ. ಈ ದೇಹವನ್ನು ಕಣ್ಗಾವಲು ಕಾಯಲಾಗುತ್ತದೆ. ಇದಕ್ಕೆ ಫೊಕೋರವರು ಕಾವಲುಗೋಪುರ ಎಂಬ ಕಲ್ಪನೆಯನ್ನು ಬಳಸಿಕೊಂಡಿದ್ದಾರೆ, ಯಾವುದೇ ಕಾರಾಗೃಹದ ಮಧ್ಯಭಾಗದಲ್ಲಿ ಅತಿ ಎತ್ತರವಾದ ಕಾವಲುಗೋಪುರ ಇರುತ್ತದೆ. ಈ ಕಾವಲುಗೋಪುರದ ಮೂಲಕ ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತದೆ. ಇದರ ಮೂಲಕ ಪ್ರತಿಯೊಬ್ಬ ಕೈದಿಯ ಮೇಲೂ ಅಧಿಕಾರ ಚಲಾಯಿಸಲಾಗುತ್ತದೆ.
ಹಾಗೆಯೇ ಇಡೀ ಸಮಾಜ ಕಾರಾಗೃಹದಂತೆ ಇದ್ದು ಶಾಲೆ, ಕಾಲೇಜುಗಳು, ಆಸ್ಪತ್ರೆಗಳು ಕಾರಾಗೃಹವನ್ನು ಪ್ರತಿನಿಧಿಸುತ್ತವೆ. ಅಂದರೆ ಪ್ರತಿಯೊಬ್ಬರನ್ನೂ ನಿಯಂತ್ರಿಸಲಾಗುತ್ತದೆ, ನಂತರ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತದೆ ಹಾಗೂ ನ್ಯಾಯಾಲಯದಲ್ಲಿ ಅವನ ಅಪರಾಧಕ್ಕೆ ತಕ್ಕ ಪ್ರಮಾಣದ ಶಿಕ್ಷೆಯನ್ನು ನೀಡುತ್ತಾರೆ. ಇವೆಲ್ಲವನ್ನೂ ಜ್ಞಾನವನ್ನು ಸಂಘಟಿಸುವುದರ ಮೂಲಕ ನಿರ್ವಹಿಸಲಾಗುತ್ತದೆ. ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ರೀತಿಯ ಜ್ಞಾನವು ಕಾರ್ಯನಿರ್ವಹಿಸುತ್ತದೆ. ಹೀಗೆ ಕಾರ್ಯ ನಿರ್ವಹಿಸುವುದರಿಂದ ಅಧಿಕಾರವಾಗಿ ಪರಿವರ್ತನೆಯಾಗುತ್ತದೆ. ನ್ಯಾಯಾಲಯದ ಕಾನೂನುಗಳು, ಜೈಲಿನ ನಿಯಮಗಳು ಇವೆಲ್ಲವೂ ಜ್ಞಾನದ ಈ ಅಧಿಕಾರದ ರೂಪವಾಗಿ ಮಾರ್ಪಡುತ್ತವೆ. ಅಂತಿಮವಾಗಿ ಜ್ಞಾನವೇ ಅಧಿಕಾರವಾಗುತ್ತದೆ. ಫೊಕೋರವರ ಈ ಕೃತಿಯು ಅನೇಕ ನೈತಿಕವಾದಿಗಳ ಚಿಂತನೆಯ ಬುಡವನ್ನು ಅಲುಗಾಡಿಸಿತು. ಹಾಗೆಯೇ ಅನೇಕರ ಮೆಚ್ಚುಗೆಗೂ ಪಾತ್ರವಾಯಿತು. ಕೆಲವರಂತೂ ಫೊಕೋ ನಮ್ಮನ್ನು ಆಧುನಿಕ ಮತ್ತು ಪುನರುಜ್ಜೀವನದ ಆಲೋಚನೆಯಿಂದ ಸ್ವತಂತ್ರಗೊಳಿಸುತ್ತಿದ್ದಾರೆ ಎಂಬ ಮೆಚ್ಚುಗೆಯನ್ನು ಸೂಚಿಸಿದರು.
ಅರ್ಧ ಶತಮಾನದ ಹಿಂದೆ ಫೊಕೋ ಮಾಡಿದ ಈ ವಿಶ್ಲೇಷಣೆಯು ಈಗ ಸಿಸಿ ಟಿವಿ ಕ್ಯಾಮರಾ, ಆಧಾರ್ ಗುರುತಿನ ಚೀಟಿ ಹಾಗೂ ಇನ್ನಿತರ ರೂಪಗಳಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಫೊಕೋರವರ ಮತ್ತೊಂದು ಪುಸ್ತಕ ಹಿಸ್ಟರಿ ಆಫ್ ಸೆಕ್ಷುವಾಲಿಟಿ ಈ ಪುಸ್ತಕವು ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಅವರು ಈ ಕೃತಿಯಲ್ಲಿ ಜನರನ್ನು ಲೈಂಗಿಕವಾಗಿ ಏಕೆ ದಮನ ಮಾಡಲಾಗುತ್ತದೆ ಮತ್ತು ಮುಚ್ಚಿಡಲಾಗುತ್ತದೆ ಆದರೂ ಕೂಡ ಜನ ಸದಾ ಲೈಂಗಿಕತೆಯ ಬಗ್ಗೆ ಏಕೆ ಆಲೋಚಿಸುತ್ತಾರೆ ಎಂಬುದನ್ನು ಅನ್ವೇಷಿಸಿದರು. ಪಾಶ್ಚಿಮಾತ್ಯ ಸಂಸ್ಕೃತಿಯ ವಿವಿಧ ಕಾಲಘಟ್ಟಗಳಲ್ಲಿ ಲೈಂಗಿಕತೆಯು ನೈತಿಕ ಪ್ರಶ್ನೆಯಾಗಿ ಮಾರ್ಪಟ್ಟು ಜನಸಂಖ್ಯೆಯನ್ನು ನಿಯಂತ್ರಿಸುವ ಸಾಧನವಾಗಿ ಬೆಳೆದುಬಂದ ಬಗೆಯನ್ನು ಅನಾವರಣ ಮಾಡುತ್ತಾರೆ. ಇದನ್ನು ಅವರು ಬಯೋಪಾಲಿಟಿಕ್ಸ್ ಎಂದು ಕರೆಯುತ್ತಾರೆ. ಲೈಂಗಿಕತೆಯನ್ನು ನಿರೂಪಿಸುವಾಗ ಮನಃಶಾಸ್ತ್ರ, ಸಮಾಜಶಾಸ್ತ್ರ, ವೈದ್ಯಶಾಸ್ತ್ರಗಳು ಪ್ರಭುತ್ವಕ್ಕೆ ಅನುಕೂಲಕರವಾದ ವ್ಯಾಖ್ಯಾನವನ್ನು ನೀಡುವುದನ್ನು ಗುರುತಿಸಿದ್ದಾರೆ. ಕ್ರಿಶ್ಚಿಯನ್ ಧರ್ಮವು ಲೈಂಗಿಕತೆ ಮತ್ತು ಸತ್ಯವನ್ನು ತಳುಕು ಹಾಕಿ ಜನರ ಮೇಲೆ ಧಾರ್ಮಿಕ ಅಧಿಕಾರವನ್ನು ಚಲಾಯಿಸುವುದನ್ನು ನಿರೂಪಿಸಿದ್ದಾರೆ. ವಿವಾಹ ಎಂಬುದು ಕೇವಲ ಲೈಂಗಿಕ ಸಂಬಂಧವಾಗಿರದೆ ಅದೊಂದು ಆರ್ಥಿಕ ಸಂಬಂಧವೂ ಆಗಿರುವುದನ್ನು ತಿಳಿಸುತ್ತಾರೆ.
ಹೀಗೆ ಫೊಕೋ ತಮ್ಮ ಪ್ರತೀ ಕೃತಿಯಲ್ಲಿಯೂ ಅಧಿಕಾರ ಮತ್ತು ಜ್ಞಾನಕ್ಕಿರುವ ಸಂಬಂಧವನ್ನು ಪರಿಶೀಲಿಸಿದರು. ಜ್ಞಾನವು ಅಧಿಕಾರದ ಮೂಲಕ ಸಂಘಟಿತವಾಗಿ ಜನರನ್ನು ದಮನಿಸುವ ಸಾಧನವಾಗಿರುವ ಬಗೆಯನ್ನು ತಿಳಿಸಿಕೊಟ್ಟರು. ಫೊಕೋರವರ ಕೃತಿಗಳು ಮತ್ತು ವಿಚಾರಗಳು ಅವರು ಬದುಕಿದ್ದ ಕಾಲಾನಂತರದಲ್ಲಿ ತೀವ್ರ ಮೆಚ್ಚುಗೆ ಮತ್ತು ಟೀಕೆಗಳಿಗೆ ಒಳಪಟ್ಟಿವೆ. ಅವರನ್ನು ಅರಾಜಕ ಜಗತ್ತನ್ನು ಸಮರ್ಥಿಸುವ ಅಪರಾಧ ಮತ್ತು ಮುಕ್ತ ಲೈಂಗಿಕತೆಯನ್ನು ಬೆಂಬಲಿಸುವ ತತ್ವಜ್ಞಾನಿ ಎಂದು ಕೆಲವರು ಅರೋಪಿಸುತ್ತಾರೆ. ಅವರನ್ನು ಮೆಚ್ಚುವವರು ಸತ್ಯವನ್ನು ಅಣುಅಣುವಾಗಿ ವಿಶ್ಲೇಷಿಸಿದ, ಸಮಾಜವನ್ನು ತಳಸ್ಪರ್ಶಿಯಾಗಿ ಗ್ರಹಿಸಲು ನೆರವಾದ ಗೆಳೆಯ ಎಂದು ಭಾವಿಸುತ್ತಾರೆ.
ಇಪ್ಪತ್ತನೆ ಶತಮಾನದ ಪ್ರಸಿದ್ಧ ತತ್ವಜ್ಞಾನಿ ಮಿಶೆಲ್ ಫೊಕೋ ನಿರ್ಗಮಿಸಿ ಇದೇ ಜೂನ್ 25ಕ್ಕೆ 33 ವರ್ಷಗಳಾಗಲಿದೆ. ಧರ್ಮ ಮತ್ತು ಪ್ರಭುತ್ವದಿಂದ ರೂಪಿಸಲ್ಪಟ್ಟ ಜ್ಞಾನ, ಜನರನ್ನು ಅಧೀನಗೊಳಿಸುವ ಬಗೆಯನ್ನು ವಿವರವಾಗಿ ಬಿಡಿಸಿಟ್ಟ ಸಮಾಜ ವಿಜ್ಞಾನಿ. ಕೇವಲ ಐವತ್ತೇಳು ವರುಷ ಬದುಕಿದ್ದ ಫೊಕೋ ಸದಾ ಪ್ರಭುತ್ವದ ದಮನಕಾರಿ ನೀತಿಗಳ ವಿರುದ್ಧ ಕ್ರಿಯಾಶೀಲನಾಗಿದ್ದವರು. ತನ್ನ ದೇಹ ಮತ್ತು ಮನಸ್ಸನ್ನು ಪ್ರಯೋಗಕ್ಕೆ ಒಡ್ಡಿಕೊಂಡ ಗಟ್ಟಿಗ. ಬೋಳುತಲೆಯ ತುಂಬು ಕುತ್ತಿಗೆಯ ಜರ್ಕಿನ್ ತೊಟ್ಟ ಪ್ಯಾರಿಸ್ಸಿನ ಸೊಗಸುಗಾರ ಜಗತ್ತಿನ ಸಂಕೇತದಂತಿದ್ದ. ಅವಿವಾಹಿತರಾಗಿದ್ದ ಆತ ಸಲಿಂಗಕಾಮಿ, ಅರಾಜಕತವಾದಿಯೆಂದು ಟೀಕಿಸಲ್ಪಟ್ಟರು. ಮಿಶೆಲ್ ಫೊಕೋ ರವರು ಫ್ರಾನ್ಸ್‌ನ ತತ್ವಜ್ಞಾನಿ, ರಾಜಕೀಯ ಚಿಂತಕ ಮತ್ತು ಸಮಾಜಶಾಸ್ತ್ರಜ್ಞ, ಜೊತೆಗೆ ಸಮಕಾಲೀನ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಮಾರ್ಕ್ಸ್‌ವಾದಿ ಚಿಂತನೆಯನ್ನು ಮುಂದುವರಿಸಿದ ಫೊಕೋ ಅದನ್ನು ಭಿನ್ನವಾಗಿ ಅರ್ಥೈಸಿದ್ದರು.
ಸದಾ ಸ್ವಾತಂತ್ರ್ಯವನ್ನು ಅರಸಿ ಹಾರುವ ಹಕ್ಕಿಯಂತಿದ್ದ. ಫೊಕೋ ಬಗ್ಗೆ ಕನ್ನಡ ಸಾಂಸ್ಕೃತಿಕ ಜಗತ್ತಿನಲ್ಲಿ ಈ ವರ್ಷವೇ ಎರಡು ಪುಸ್ತಕಗಳು ಬಂದಿವೆ. ಪರಸ್ಪರ ಪ್ರಕಾಶನ ಪ್ರಕಟಿಸಿರುವ ಅಶ್ವಿನ್‌ಕುಮಾರ್ ಸಂಪಾದಿಸಿರುವ ಅನುವಾದಿತ ಕೃತಿ ಮತ್ತು ಎಸ್.ಎಸ್.ಗುಂಡೂರರ ಫೊಕೋ ಕೃತಿ.
ಫೊಕೋ ಬಗೆಗಿನ ಹೆಚ್ಚಿನ ತಿಳುವಳಿಕೆಗೆ ಓದುಗರು ಪುಸ್ತಕಗಳನ್ನು ನೋಡಬಹುದು. ಸತತವಾದ ಕಠಿಣ ಅಧ್ಯಯನದಿಂದ ಫೊಕೋರಿಗೆ ಮಹತ್ವದ ಕೃತಿಗಳನ್ನು ರಚಿಸಲು ಸಾಧ್ಯವಾಯಿತು.
ಅವರ ಪ್ರಮುಖ ಕೃತಿಗಳು
ಮ್ಯಾಡ್‌ನೆಸ್ ಆ್ಯಂಡ್ ಸಿವಿಲೈಝೇಷನ್. ಎ ಹಿಸ್ಟರಿ ಆಫ್ ಇನ್‌ಸೇನಿಟಿ ಇನ್ ದಿ ಏಜ್ ಆಫ್ ರೀಸನ್ ದಿ ಆರ್ಡರ್ ಆಫ್ ಥಿಂಗ್ಸ್ ಆ್ಯನ್ ಆರ್ಕಿಯಾಲಜಿ ಆಫ್ ಹ್ಯೂಮನ್ ಸೈನ್ಸಸ್
ದಿ ಆರ್ಕಿಯಾಲಜಿ ಆಫ್ ನಾಲೆಡ್ಜ್
ಬರ್ತ್ ಆಫ್ ದಿ ಕ್ಲಿನಿಕ್
ಡಿಸಿಪ್ಲಿನ್ ಆ್ಯಂಡ್ ಪನಿಶ್‌ಮೆಂಟ್
ಹಿಸ್ಟರಿ ಆಫ್ ಸೆಕ್ಷುಯಾಲಿಟಿ.
- ಮೇಲಿನ ಶೀರ್ಷಿಕೆಗಳು ಸೂಚಿಸುವಂತೆ ಫೊಕೋರವರು ಮಾನವ ಜೀವನಾನುಭವದ ಇತಿಹಾಸವನ್ನು ಬರೆದಿದ್ದಾರೆ. ಈ ರೀತಿಯ ಚಿಂತನೆಗಳಿಂದ ಫೊಕೋ ಇತಿಹಾಸದ ಅಧ್ಯಯನಕ್ಕೆ ಹೊಸ ಮುನ್ನುಡಿಯನ್ನು ಬರೆದರು.







