ಅಮೆರಿಕ ಚುನಾವಣೆಯಲ್ಲಿ ಟ್ರಂಪ್‌ಗೆ ಪುಟಿನ್ ನೆರವು ಸಿಐಎಗೆ ತಿಳಿದಿತ್ತು

ವಾಶಿಂಗ್ಟನ್, ಜೂ. 24: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಸಹಾಯ ಮಾಡಲು ಕಾರ್ಯಾಚರಣೆಯೊಂದನ್ನು ನಡೆಸುವಂತೆ ಸ್ವತಃ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆದೇಶ ನೀಡಿರುವ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಗೆ ಕಳೆದ ವರ್ಷದ ಆಗಸ್ಟ್‌ನಲ್ಲೇ ಮಾಹಿತಿ ಲಭಿಸಿತ್ತು ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಈ ಗುಪ್ತಚರ ಮಾಹಿತಿಯನ್ನು ಕೇಳಿ ಶ್ವೇತಭವನವು ಆಘಾತಕ್ಕೊಳಗಾಗಿತ್ತು ಹಾಗೂ ಇದಕ್ಕೆ ಹೇಗೆ ಪ್ರತಿಕ್ರಿಯಿಸುವುದು ಎಂಬುದನ್ನು ನಿರ್ಧರಿಸಲು ಅಮೆರಿಕದ ಭದ್ರತಾ ವ್ಯವಸ್ಥೆಯ ಮುಖ್ಯಸ್ಥರು ಅತ್ಯಂತ ರಹಸ್ಯ ಬಿಕ್ಕಟ್ಟು ನಿರ್ವಹಣೆ ಮಾತುಕತೆ ನಡೆಸಿದ್ದರು ಎಂದು ಅದು ಹೇಳಿದೆ.
ಇದರ ಹೊರತಾಗಿಯೂ, ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಚುನಾವಣೆಯನ್ನು ಗೆಲ್ಲಬಹುದು ಎಂಬ ವಿಶ್ವಾಸ ಹಾಗೂ ಸ್ವತಃ ಅಧ್ಯಕ್ಷ ಬರಾಕ್ ಒಬಾಮರೇ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿರುವಂತೆ ಕಂಡುಬಂದ ಆತಂಕಗಳ ಹಿನ್ನೆಲೆಯಲ್ಲಿ, ಅಮೆರಿಕದ ಆಡಳಿತವು ರಶ್ಯಕ್ಷೆ ಎಚ್ಚರಿಕೆ ನೀಡಿತು. ಆದರೆ, ಅದಕ್ಕೆ ಪ್ರತಿಯಾಗಿ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಚುನಾವಣೆ ಮುಗಿಯುವವರೆಗೆ ಮುಂದೂಡಿತು ಎಂದು ವಾಶಿಂಗ್ಟನ್ ಪೋಸ್ಟ್ ಶುಕ್ರವಾರ ವರದಿ ಮಾಡಿದೆ.
ಚುನಾವಣೆಯಲ್ಲಿ ಟ್ರಂಪ್ ಗೆದ್ದ ಬಳಿಕ ತೀವ್ರ ಪಶ್ಚಾತ್ತಾಪಪಟ್ಟ ಆಡಳಿತದ ಅಧಿಕಾರಿಗಳು, ಚುನಾವಣೆಯ ವೇಳೆಯೇ ಕಠಿಣ ನಿರ್ಧಾರ ತೆಗೆದುಕೊಳ್ಳದಿರುವುದಕ್ಕಾಗಿ ತೀವ್ರ ವಿಷಾದ ವ್ಯಕ್ತಪಡಿಸಿದರು.







