ಏಕರೂಪ ತಂತ್ರಾಂಶಗಳ ಅಳವಡಿಕೆಯಿಂದ ಕನ್ನಡ ಹೆಚ್ಚು ಪರಿಣಾಮಕಾರಿ: ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು,ಜೂ.24: ಕನ್ನಡ ಗಣಕ ಪರಿಷತ್ತು ಅಭಿವೃದ್ಧಿಪಡಿಸಿರುವ ನುಡಿ-6 ಏಕರೂಪ ತಂತ್ರಾಂಶವನ್ನು ಆಡಳಿತ ಮತ್ತು ಸಾಮುದಾಯಿಕ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವುದರಿಂದ ಕನ್ನಡ ಹೆಚ್ಚು ಪರಿಣಾಮಕಾರಿಯಾಗಿ ಜಾರಿಯಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ನಡೆದ ಕನ್ನಡ ತಂತ್ರಾಂಶ ತಯಾರಕರ, ಪ್ರಕಾಶನ ಮತ್ತು ಮುದ್ರಣ ಮಾಧ್ಯಮದವರೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಏಕಸಾಮ್ಯವಿರದ ಮತ್ತು ಏಕರೂಪವಿರದ ಕನ್ನಡ ತಂತ್ರಾಂಶಗಳನ್ನು ಬಳಸುತ್ತಿರುವುದರಿಂದ ಸಂವಹನೆಗೆ ತೊಡಕುಂಟಾಗುತ್ತಿದೆ. ಏಕರೂಪ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವುದರಿಂದ ಬಳಕೆದಾರರು ಹೆಚ್ಚು ಸ್ವತಂತ್ರವಾಗಿ, ಯಾವುದೇ ಅಳುಕಿಲ್ಲದೆ ಮತ್ತು ಅಧಿಕೃತತೆಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕನ್ನಡ ನುಡಿ 6ರ ಕುರಿತು ಮಾತನಾಡಿದ ಕನ್ನಡ ಗಣಕ ಪರಿಷತ್ತಿನ ಜಿ.ಎನ್.ನರಸಿಂಹಮೂರ್ತಿ ಅವರು ನುಡಿ-6 ಯುನಿಕೋಡ್ ತಂತ್ರಾಂಶ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿದ್ದು ಹೆಚ್ಚು ದಕ್ಷತೆಯಿಂದಲೂ ಮತ್ತು ಸರಳವಾಗಿಯೂ ಇದೆ ಎಂದು ತಿಳಿಸಿದರು. ಅಂತರ್ಜಾಲ ಅಥವಾ ಯಾವುದೇ ಅಪ್ಲಿಕೇಶನ್ ಬಳಸುತ್ತಿದ್ದರೂ ನುಡಿ-6 ಯುನಿಕೋಡ್ ತಂತ್ರಾಂಶ ಅತ್ಯಂತ ಬಳಕೆ ಸ್ನೇಹವಾಗಿದ್ದು ಯುನಿಕೋಡ್ ಬೆಂಬಲಿಸುವ 10 ಅಕ್ಷರ ವಿನ್ಯಾಸ ಶೈಲಿಯನ್ನೂ ನೀಡಿರುವುದರಿಂದ ಇದು ಅತ್ಯಂತ ಪರಿಣಾಮಕಾರಿ ಎಂದು ಹೇಳಿ ಎಲ್ಲರೂ ಏಕರೂಪ ತಂತ್ರಾಂಶವನ್ನು ಬಳಸಿಕೊಳ್ಳುವುದರಿಂದ ಕನ್ನಡದ ಅಭಿವ್ಯಕ್ತಿ ಸಾಧ್ಯವಾಗಲಿದೆ ಎಂದರು.







