ಜೂ.27ಕ್ಕೆ ನಾಡಪ್ರಭು ಕೆಂಪೇಗೌಡ ಜಯಂತಿ: ಡಿ.ಕೆ. ಶಿವಕುಮಾರ್

ಬೆಂಗಳೂರು, ಜೂ. 24: ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಜೂ.27ರಂದು ಆಚರಿಸಲಾಗುತ್ತದೆ ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಂಪೇಗೌಡರ ಆಡಳಿತದ ಅವಧಿಯಲ್ಲಿ ಬೆಂಗಳೂರು ವಿಶ್ವದ ಗಮನ ಸೆಳೆದಿತ್ತು. ಆರಂಭದಿಂದಲೂ ವಾಣಿಜ್ಯ ನಗರಿಯೆಂದೆ ಬೆಂಗಳೂರು ಬೆಳಕಿಗೆ ಬಂದಿತ್ತು. ಆಧುನಿಕ ನಗರ ಯಾವ ರೀತಿ ಇರಬೇಕೆಂಬುದನ್ನು ನಾಡಪ್ರಭು ಕೆಂಪೇಗೌಡ 1537ರಲ್ಲಿಯೆ ಯೋಚಿಸಿದ್ದರು ಎಂದು ಸ್ಮರಿಸಿದರು.
ಬೆಂಗಳೂರು ನಗರದ ನಾಲ್ಕು ದಿಕ್ಕುಗಳಲ್ಲಿ ಗಡಿ ಸ್ಥಾಪಿಸಿದ್ದು ಇಂದಿಗೂ ಸಾಕ್ಷಿಯಾಗಿವೆ. ಇನ್ನು ಮುಂದೆ ಪ್ರತಿವರ್ಷ ಜೂ.27ರಂದು ನಾಡಪ್ರಭು ಕೆಂಪೇಗೌಡ ಅವರ ಜನ್ಮದಿನವನ್ನು ರಾಜ್ಯ ಸರಕಾರದ ಕಾರ್ಯಕ್ರಮವನ್ನಾಗಿ ಸರಕಾರ ಆಚರಿಸುತ್ತದೆ ಎಂದ ಅವರು, ಈ ವರ್ಷ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹಾಗೂ ಮುಂದಿನ ವರ್ಷದಿಂದ ಏಕಕಾಲಕ್ಕೆ ರಾಜ್ಯದೆಲ್ಲೆಡೆ ಕೆಂಪೇಗೌಡರ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದು ಎಂದ ಅವರು, ಕೆಂಪೇಗೌಡರ ಕಾಲದಲ್ಲೇ ಅಕ್ಕಿಪೇಟೆ, ತಿಗಳರ ಪೇಟೆ, ನಗರತ್‌ಪೇಟೆ ಎಂಬ ವಿವಿಧ ವ್ಯಾಪಾರ ವಲಯಗಳಿಗೆ ಪ್ರತ್ಯೇಕವಾದ ಪೇಟೆಗಳನ್ನು ನಿರ್ಮಾಣ ಮಾಡಿ ವಾಣಿಜ್ಯ ನಗರ ಎಂಬುದನ್ನು ಆಗಲೇ ಸಾಬೀತು ಪಡಿಸಿದರು ಎಂದರು.
480 ವರ್ಷಗಳ ಹಿಂದೆಯೇ ಕೆಂಪೇಗೌಡ ಅವರು ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ಶ್ರಮಿಸಿದರು. ಅದೇ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ರಾಜ್ಯ ಸರಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ ಎಂದು ಹೇಳಿದರು.
ಕೆೆಂಪೇಗೌಡರು ಎಲ್ಲ ಜಾತಿ ಧರ್ಮಗಳ ರಕ್ಷಣೆಯೊಂದಿಗೆ ಎಲ್ಲರನ್ನೂ ಸಮಾನವಾಗಿ ಕಂಡವರು. ಅದೇ ರೀತಿ ನಮ್ಮ ಸರಕಾರವೂ ಎಲ್ಲರನ್ನು ಒಂದೇ ರೀತಿ ಕಾಣುತ್ತದೆ. ಅಲ್ಲದೆ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸುತ್ತಿದ್ದು ಬೆಂಗಳೂರು ನಗರಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ನಮ್ಮ ಸರಕಾರ ಕಲ್ಪಿಸಿಕೊಡುತ್ತಿದೆ ಎಂದರು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಸದ್ಯಕ್ಕೆ ಮೇಯೋಹಾಲ್‌ನಲ್ಲಿ ತಾತ್ಕಾಲಿಕವಾಗಿ ಕಾರ್ಯ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಮಾಗಡಿ ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ 5 ಎಕರೆ ಜಾಗದಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ವಿಶ್ವ ವಿದ್ಯಾಲಯ ಮತ್ತು ಬಿಬಿಎಂಪಿ ವತಿಯಿಂದ ಕೆಂಪೇಗೌಡ ಅವರ ಚಿಂತನೆ ಕುರಿತ ಸಂಶೋಧನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದು ಸರಕಾರ ಇದಕ್ಕಾಗಿ 50 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ತಿಳಿಸಿದರು.







