ಸಮಾಜದ ಜವಾಬ್ದಾರಿಯುತ ಪ್ರಜೆಗಳಾಗಲು ಪ್ರಯತ್ನಿಸಿ: ಕೇಂದ್ರ ಸಚಿವ ಸದಾನಂದಗೌಡ
.jpg)
ಬೆಂಗಳೂರು, ಜೂ.24: ಸಮಾಜದಲ್ಲಿನ ವಾಸ್ತವಿಕ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಎಡಿಎ ರಂಗ ಮಂದಿರದಲ್ಲಿ ಆಯೋಜಿಸಿದ್ದ ಆರ್ಥಿಕ-ಸಾಮಾಜಿಕ ಪರಿವರ್ತನಾ ಸಂಸ್ಥೆಯ 7ನೆ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಗಳಂತೆ ಬಾಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ಪ್ರೀತಿ, ವಿಶ್ವಾಸ, ಸಂಸ್ಕಾರ, ಸಂಸ್ಕೃತಿಗಳ ಮೇಲೆ ಸಮಾಜ ವ್ಯವಸ್ಥೆ ನಿಂತಿದೆ. ಈ ನಾಲ್ಕು ಆಧಾರಗಳ ಬಂಧನವನ್ನು ಇನ್ನಷ್ಟು ಗಟ್ಟಿಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಕರೆಕೊಟ್ಟರು.
ಕೈಗಾರಿಕರಣದ ಪರಿಣಾಮ ಮನುಷ್ಯನ ಜೀವನವೂ ಯಾಂತ್ರಿಕೃತವಾಗಿದೆ. ಇದರಿಂದ ಮಾನವನ ಸಂಬಂಧಗಳ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ಹಳೆಯ ವಸ್ತುಗಳಿಂದಲೇ ಹೊಸ ಅನ್ವೇಷಣೆಗಳು ನಡೆಯಲು ಸಾಧ್ಯ. ನಮ್ಮ ಸಮಾಜದಲ್ಲಿನ ಆಚಾರ ವಿಚಾರಗಳನ್ನು ಪಾಲಿಸುವದರೊಂದಿಗೆ ಆಧುನಿಕ ಜೀವನವನ್ನು ರೂಢಿಸಿಕೊಳ್ಳಬೇಕು ಎಂದರು.
ಆರ್ಥಿಕ-ಸಾಮಾಜಿಕ ಪರಿವರ್ತನಾ ಸಂಸ್ಥೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿದೆ. ಸಮಾಜದಲ್ಲಿ ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿದ 25 ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಉದ್ಯಮಿ ಎಸ್.ಟಿ.ಪಿ.ನಾಯಕ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿರ್ದೇಶಕ ಟಿ.ಎನ್.ಸೀತಾರಾಮ್, ಉದ್ಯಮಿ ಅನಿಲ್‌ಕುಮಾರ್ ಮಲ್ಬಾನಿ, ನಟಿ ಭವಾನಿ ಪ್ರಕಾಶ್ ಸೇರಿದಂತೆ ಇತರರು ಇದ್ದರು.







