ತಲಪಾಡಿ ಗ್ರಾಮ ಸಭೆ: ಪಿಡಿಓ ವರ್ಗಾವಣೆಗೆ ಒಕ್ಕೊರಲ ವಿರೋಧ
ಉಳ್ಳಾಲ, ಜೂ.24: ತಲಪಾಡಿ ಗ್ರಾಮ ಪಂಚಾಯತ್ ಗ್ರಾಮಸಭೆಯು ಶನಿವಾರ ನಡೆದಿದ್ದು, ಈ ಸಂದರ್ಭದಲ್ಲಿ ಪಿಡಿಒ ವರ್ಗಾವಣೆಗೆ ವಿರೋಧ, ರಸ್ತೆ ಸಮಸ್ಯೆ ಸೇರಿದಂತೆ ಹಲವಾರು ವಿಷಯಗಳು ಚರ್ಚೆಗೊಂಡವು. ಪಿಡಿಒ ವರ್ಗಾವಣೆಯ ವಿರುದ್ದ ದ್ವನಿಯೆತ್ತಿದ ಗ್ರಾಮಸ್ಥರು, ಹಿಂದಿನ ಪಿಡಿಓಗಳು ಯಾವುದೇ ಕೆಲಸಕ್ಕೂ ಲಂಚ ನೀಡದೆ ಮಾಡುತ್ತಿರಲಿಲ್ಲ, ಸಮಸ್ಯೆ ಹೇಳಿಕೊಂಡು ಪಂಚಾಯಿತಿಗೆ ಹೋದರೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅದೆಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಪ್ರಗತಿ ಕಂಡಿವೆ. ಹಲವು ವರ್ಷಗಳ ಬಳಿಕ ಗ್ರಾಮ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಇದಕ್ಕೆ ಪಿಡಿಓ ಶ್ರಮ ಪ್ರಮುಖವಾಗಿರುವುದರಿಂದ ಅವರನ್ನು ಇನ್ನೂ ಒಂದೆರೆಡು ವರ್ಷ ಗ್ರಾಮದಲ್ಲಿ ಉಳಿಸಬೇಕು ಎಂದು ಆಗ್ರಹಿಸಿದರು.
ಒಕ್ಕೊರಲ ಆಗ್ರಹಕ್ಕೆ ತಲೆತಗ್ಗಿಸಿದ ಗ್ರಾಮ ಪಂಚಾಯತ್ ಅದ್ಯಕ್ಷ ಸುರೇಶ್ ಆಳ್ವ, ವರ್ಗಾವಣೆ ಎನ್ನುವುದು ಸರ್ಕಾರದ ನಿರ್ಧಾರ. ಆದರೂ ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮಸಭೆಯಲ್ಲೇ ನಿರ್ಣಯ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರನ್ನು ಸಮಧಾನಪಡಿಸಲು ಯತ್ಜಿಸಿದರು.
ರಸ್ತೆಗಾಗಿ ವಾಗ್ವಾದ
ಮಕ್ಯಾರ್ ರಸ್ತೆ ಕೆಸರುಮಯಗೊಂಡು ನಡೆದಾಡಲೂ ಅಸಾಧ್ಯವಾದ ಸ್ಥಿತಿಯಲ್ಲಿದೆ. ಗ್ರಾಮ ಪಂಚಾಯತ್ ಹಲವು ಬಾರಿ ಮಾಡಿದ ಮನವಿ ಪ್ರಯೋಜನವಾಗಿಲ್ಲ. ಇನ್ನಷ್ಟು ವರ್ಷ ರಸ್ತೆ ದುರಸ್ತಿಗೆ ಬೇಕು ಎಂದು ಗ್ರಾಮಸ್ಥರೊಬ್ಬರು ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ಪಿಡಿಓ ಕೃಷ್ಣ ನಾಯಕ್, ಕಳೆದ 20 ವರ್ಷಗಳಿಂದ ಕಾಲುದಾರಿಯಾಗಿದ್ದನ್ನು ಕಳೆದ ವರ್ಷ ಗ್ರಾ.ಪಂ.ನಿಂದ ರಸ್ತೆಯನ್ನಾಗಿ ಮಾಡಲಾಗಿದ್ದು, ಕಾಂಕ್ರೀಟ್‌ಗೆ ಅನುದಾನ ಮೀಸಲಿಡಲಾಗಿದೆ. ಇತ್ತೀಚೆಗೆ ನಿಮ್ಮ ತಂದೆ ಗ್ರಾಮ ಪಂಚಾಯಿತಿ ಸದಸ್ಯ ಖಾದರ್ ಅವರೊಡನೆ ಸೇರಿ ಜಲ್ಲಿಹುಡಿ ಹಾಕಲಾಗಿದ್ದು, ಒಂದಷ್ಟು ರಸ್ತೆ ಉಳಿದಿದೆ ಎಂದರು. ಈ ಸಂದರ್ಭ ಖಾದರ್ ಅವರೂ ಮಾತನಾಡಿದ್ದು, ಅಪ್ಪ-ಮಗನ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯೋಜಕಿ ಶ್ಯಾಮಲಾ ನೋಡೆಲ್ ಅಧಿಕಾರಿಯಾಗಿದ್ದರು. ಗ್ರಾ.ಪಂ. ಅಧ್ಯಕ್ಷ ಸುರೇಶ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜಯಲಕ್ಷ್ಮಿ, ತಾಲೂಕು ಪಂಚಾಯಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಕಂದಾಯ ಇಲಾಖೆಯ ಶಿಲ್ಪಾ, ಮೆಸ್ಕಾಂನ ಪ್ರವೀಣ್, ಅರಣ್ಯ ಇಲಾಖೆಯ ಸೌಮ್ಯಾ, ಶಿಕ್ಷಣ ಇಲಾಖೆಯ ವೀಣಾ, ಗ್ರಾಮ ಪಂಚಾಯಿತಿ ವಿಭಾಗದ ಕಿರಿಯ ಇಂಜಿನಿಯರ್ ರಾಧಾಕೃಷ್ಣ, ಆರೋಗ್ಯ ಇಲಾಖೆಯ ಮಂಜೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾರದಾ, ಪಶು ಇಲಾಖೆಯ ಆರ್.ವಿ.ಸತ್ತಿಕಲ್, ಕೃಷಿ ಇಲಾಖೆಯ ಬಾಲಕೃಷ್ಣ ಮೊದಲಾದವರು ಭಾಗವಹಿಸಿದ್ದರು.









