ಪ.ಬಂಗಾಲ: ಗೋಕಳ್ಳತನದ ಆರೋಪದಲ್ಲಿ ಮೂವರು ವ್ಯಕ್ತಿಗಳನ್ನು ಥಳಿಸಿ ಹತ್ಯೆ

ಕೋಲ್ಕತಾ,ಜೂ.24: ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಿಂದ ದನಗಳನ್ನು ಕದಿಯುತ್ತಿದ್ದ ಆರೋಪದಲ್ಲಿ ಗ್ರಾಮಸ್ಥರು ಮೂವರು ವ್ಯಕ್ತಿಗಳನ್ನು ಥಳಿಸಿ ಹತ್ಯೆಗೈದಿದ್ದಾರೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಈವರೆಗೆ ಮೂವರನ್ನು ಬಂಧಿಸಿದ್ದಾರೆ.
ಕುಟಿಪಾರಾ ನಿವಾಸಿ ನಸೀರುಲ್ ಹಕ್(32), ಕಂದರಪಾರಾದ ಮುಹಮ್ಮದ್ ಸಮೀರುದ್ದೀನ್(32) ಮತ್ತು ಧಾಲುಗಂಜ್‌ನ ಮುಹಮ್ಮದ್ ನಾಸಿರ್(33) ಅವರು ಕೊಲೆಯಾಗಿರುವ ವ್ಯಕ್ತಿಗಳಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಸೀರುಲ್ ಇಸ್ಲಾಂಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರೆ, ಇತರ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗುರುವಾರ ರಾತ್ರಿ ವ್ಯಾನಿನಲ್ಲಿ ಗ್ರಾಮವನ್ನು ಪ್ರವೇಶಿಸಿದ್ದ ಸುಮಾರು 10 ಜನರ ತಂಡವೊಂದು ಕೆಲವು ಮನೆಗಳಿಂದ ದನಗಳ ಕಳ್ಳತನಕ್ಕೆ ಹೊಂಚು ಹಾಕುತ್ತಿತ್ತೆನ್ನಲಾಗಿದ್ದು, ಗ್ರಾಮದಲ್ಲಿ ಹಿಂದೆ ದನಗಳ್ಳತನಗಳು ನಡೆದಿದ್ದರಿಂದ ಗ್ರಾಮಸ್ಥರು ಈ ಬಗ್ಗೆ ಎಚ್ಚರಿಕೆ ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಎರಡು ಮನೆಗಳಿಂದ ದನಗಳನ್ನು ಕಳವು ಮಾಡಿದ ತಂಡವು ಮೂರನೇ ಮನೆಯತ್ತ ಸಾಗುತ್ತಿದ್ದಾಗ ಮನೆಯ ಮಾಲಿಕ ಅವರನ್ನು ಗಮನಿಸಿದ್ದ. ಆತ ತಕ್ಷಣ ಇತರರಿಗೆ ಮಾಹಿತಿ ನೀಡಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ತಂಡದಲ್ಲಿದ್ದ ಮೂವರು ಜನರ ಕೈಗೆ ಸಿಕ್ಕಿಬಿದ್ದರೆ, ಉಳಿದವರು ಗ್ರಾಮದಿಂದ ಪರಾರಿಯಾಗುವಲ್ಲಿ ಸಫಲರಾಗಿದ್ದರು. ಉದ್ರಿಕ್ತ ಗುಂಪು ಅವರನ್ನು ಸಾಯುವವರೆಗೆ ಹಿಗಾಮುಗ್ಗಾ ಥಳಿಸಿತ್ತು. ಘಟನೆಯ ಬಗ್ಗೆ ನಿಷ್ಪಕ್ಷಪಾತ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ನಸೀರುಲ್ ಹಕ್‌ನ ತಾಯಿ ಮುಮ್ತಾಜ್ ಬೀವಿ ಚೋಪ್ರಾ ಪೊಲೀಸ್ ಠಾಣೆಯಲ್ಲಿ ಕೊಲೆ ದೂರು ಸಲ್ಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲಿಸರು ಶನಿವಾರ ಮೂವರನ್ನು ಬಂಧಿಸಿದ್ದಾರೆ.
ಹತ ಮೂವರೂ ಜಾನುವಾರು ಕಳ್ಳತನಗಳಲ್ಲಿ ಭಾಗಿಯಾಗಿದ್ದರು ಎನ್ನುವುದನ್ನು ಹಿಂದಿನ ದಾಖಲೆಗಳು ತೋರಿಸಿವೆ. ತನಿಖೆಯು ಮುಂದುವರಿದಿದ್ದು ಆರೋಪಿಗಳ ಬಂಧನಕ್ಕಾಗಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಎಸ್‌ಪಿ ಅಮಿತ ಕುಮಾರ್ ಭರತ್ ರಾಠೋಡ್ ಅವರು ತಿಳಿಸಿದರು.
ಬಂಧಿತರನ್ನು ಅಸಿತ್ ಬಸು,ಅಸೀಮ್ ಬಸು ಮತ್ತು ಕೃಷ್ಣ ಪೋದ್ದಾರ್ ಎಂದು ಹೆಸರಿಸಲಾಗಿದ್ದು, ಎಲ್ಲರೂ ಚೋಪ್ರಾ ನಿವಾಸಿಗಳಾಗಿದ್ದಾರೆ.







