ಸರಕಾರದ ವತಿಯಿಂದ ಜೂ.27ಕ್ಕೆ ಕೆಂಪೇಗೌಡ ಜಯಂತಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ.24: ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದಿನಾಚರಣೆಯನ್ನು ಜೂ.27 ರಂದು ಪ್ರಪ್ರಥಮ ಬಾರಿಗೆ ರಾಜ್ಯ ಸರಕಾರದ ವತಿಯಿಂದ ಆಚರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದಲ್ಲಷ್ಟೇ ಅಲ್ಲ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಲ್ಲೂ ಆಚರಣೆ ಮಾಡಲಾಗುವುದು. ಬೆಂಗಳೂರು ಇಂದು ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣ ಕೆಂಪೇಗೌಡರು ಹಾಕಿದ ಭದ್ರ ಬುನಾದಿ. ಅವರು ಅಂದು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗೋಪುರ ನಿರ್ಮಾಣ, ಅದರಿಂದ ಆಚೆಗೂ ಬೆಂಗಳೂರು ಬೆಳೆದಿದೆ ಎಂದರು.
ಏಷ್ಯಾಖಂಡದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇಂದು ಮಾಹಿತಿ ತಂತ್ರಜ್ಞ್ಞಾನ ಹಾಗೂ ಜೈವಿಕ ತಂತ್ರಜ್ಞ್ಞಾನ ಕ್ಷೇತ್ರಗಳಲ್ಲಿ ಇಡೀ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಶಿಕ್ಷಣ, ಕೈಗಾರಿಕೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಮನ್ನಣೆ ವಿಶ್ವದಲ್ಲಿ ಗಳಿಸಿದೆ. ಅದಕ್ಕಾಗಿ ಬೆಂಗಳೂರಿಗೆ ಜಾಗತಿಕ ಮನ್ನಣೆ ದೊರಕಿದೆ ಎಂದರು.
ಬೆಂಗಳೂರು ಬ್ರಾಂಡ್ ಎಂದು ಜನಪ್ರಿಯವಾಗಿದೆ. ಬೆಂಗಳೂರನ್ನು ವಿಶ್ವ ಆರ್ಥಿಕ ವೇದಿಕೆ ಅತ್ಯಂತ ಕ್ರಿಯಾಶೀಲ ನಗರಿ ಎಂದು ಬಣ್ಣಿಸಿದೆ. ಇಂದು ಬೆಂಗಳೂರು ನಗರದಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಇದರಲ್ಲಿ ಎಲ್ಲಾ ವರ್ಗದ ಜನರೂ ಇದ್ದಾರೆ. ನಗರದ ಅಗತ್ಯಕ್ಕೆ ತಕ್ಕಂತೆ ಮೂಲಭೂತ ಸೌಕರ್ಯ ಒದಗಿಸಲು ನಮ್ಮ ಸರಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಸಾರಿಗೆ ವ್ಯವಸ್ಥೆ, ಕುಡಿಯುವ ನೀರು ವ್ಯವಸ್ಥೆ, ವಸತಿ ವ್ಯವಸ್ಥೆ, ರಸ್ತೆಗಳು, ಪ್ಲೈ ಓವರ್‌ಗಳು, ಸ್ಕೈವಾಕ್‌ಗಳು ಈ ರೀತಿಯ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದೇವೆ. ನಗರಕ್ಕೆ ಸೇರ್ಪಡೆಯಾಗಿರುವ ನಗರಸಭೆ, ಪುರಸಭೆಗಳಿಗೂ ಕಾವೇರಿ ನೀರು ಒದಗಿಸಲು ಕ್ರಮ ವಹಿಸಲಾಗಿದೆ. ಈ ವರ್ಷ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಜನರಿಗೆ ಒದಗಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ನಮ್ಮ ಸರಕಾರವು ಬೆಂಗಳೂರು ಮೂಲಭೂತ ಅಭಿವೃದ್ಧಿಗೆ 7,300 ಕೋಟಿ ರೂ.ವೆಚ್ಚ ಮಾಡಿದೆ. ಈ ವರ್ಷ ಡಿಸೆಂಬರ್ ವೇಳೆಗೆ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಕಾವೇರಿ ನೀರನ್ನು ಇಡೀ ಬೆಂಗಳೂರಿಗೆ ಕೊಟ್ಟಿದ್ದೇವೆ. ಅದರಲ್ಲಿ ಕೊಳಗೇರಿ ನಿವಾಸಿಗಳಿಗೆ ಮಾಸಿಕ ಹತ್ತು ಸಾವಿರ ಲೀಟರ್ ನೀರನ್ನು ಉಚಿತವಾಗಿ ಕೊಡುತ್ತಿದ್ದೇವೆ. ಬಡವರಿಗೆ ಒಂದು ಲಕ್ಷ ಮನೆ ನಿರ್ಮಿಸಿ ಕೊಡುತ್ತಿದ್ದೇವೆ. ಬೆಂಗಳೂರು ಎಲ್ಲಾ ವರ್ಗದ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಸಂಚಾರ ಸರಿದೂಗಿಸಲು ಮೆಟ್ರೋ ಮೊದಲ ಹಂತ ಮುಕ್ತಾಯವಾಗಿದೆ. ಹಿಂದಿನ ಸರಕಾರದಲ್ಲಿ 6 ಕಿ.ಮೀ.ಮಾತ್ರ ಆಗಿತ್ತು. ನಮ್ಮ ಸರಕಾರ 34 ಕಿ. ಮೀ ಮೆಟ್ರೋ ಮಾಡಿದ್ದೇವೆ. 2020 ವೇಳೆಗೆ ಪೂರ್ಣಗೊಳ್ಳಲಿರುವ ಮೆಟ್ರೋ ಎರಡನೆ ಹಂತದ ಕಾಮಗಾರಿಗಳು ಶೇ.20 ರಷ್ಟು ಪೂರ್ಣಗೊಂಡಿದೆ. ಮೊದಲ ಹಂತಕ್ಕೆ 13,845ಕೋಟಿ ರೂ. ವೆಚ್ಚವಾಗಿದೆ. ಇದರಲ್ಲಿ ಕೇಂದ್ರದ ಪಾಲೂ ಇದೆ. 72 ಕಿ.ಮೀ ಉದ್ದವಿರುವ ಎರಡನೇ ಹಂತದ ಮೆಟ್ರೋಗೆ 26,000 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.







