ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ಅಧಿಕಾರಿ ಹತ್ಯೆ: ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ

ಶ್ರೀನಗರ, ಜೂ. 24: ಜಾಮಿಯಾ ಮಸೀದಿಯ ಹೊರಭಾಗದಲ್ಲಿ ಪೊಲೀಸ್ ಅಧಿಕಾರಿಯನ್ನು ಥಳಿಸಿ ಕೊಂದ ಪ್ರಕರಣದ ತನಿಖೆ ನಡೆಸಲು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ವಿಷೇಷ ತನಿಖಾ ತಂಡ (ಸಿಟ್) ರೂಪಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ 12 ಮಂದಿ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದೆ.
ಜಾಮಿಯಾ ಮಸೀದಿಯ ಹೊರಭಾಗದಲ್ಲಿ ಜೂನ್ 22ರಂದು ಗುಂಪೊಂದರಿಂದ ಥಳಿತಕ್ಕೊಳಗಾಗಿ ಡಿಎಸ್ಪಿ ಮುಹಮ್ಮದ್ ಆಯೂಬ್ ಪಂಡಿತ್ ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿ ತ್ವರಿತ ತನಿಖೆ ನಡೆಸಲು ಎಸ್ಪಿ ಶ್ರೇಣಿ ಅಧಿಕಾರಿಯ ನೇತೃತ್ವದ ಸಿಟ್ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ ಸಂಬಂಧಿಸಿ ಹಲವರ ಬಂಧನ ನಡೆದಿದೆ. ತನಿಖೆ ಸರಿಯಾದ ದಿಶೆಯಲ್ಲಿ ಮುಂದುವರಿಯುತ್ತಿದೆ. 12 ಮಂದಿ ಆರೋಪಿಗಳನ್ನು ಗುರುತಿಸಿದ್ದೇವೆ. ಅವರಲ್ಲಿ 5 ಮಂದಿಯನ್ನು ಬಂಧಿಸಿದ್ದೇವೆ ಎಂದು ಡಿಜಿಪಿ ಎಸ್.ಪಿ. ವಾಹಿದ್ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಥಳಿಕ್ಕೊಳಗಾದ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಇಬ್ಬರನ್ನು ಬಂಧಿಸಲಾಗಿದೆ. ಅನಂತರ ಮೂವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಡಿಜಿಪಿ ವಾಹಿದ್ ಶುಕ್ರವಾರ ತಡರಾತ್ರಿ ಎಸ್‌ಪಿ (ಉತ್ತರ ಶ್ರೀನಗರ) ಸಾಜದ್ ಖಾಲಿಖ್ ಭಟ್ ಅವರನ್ನು ವರ್ಗಾವಣೆ ಮಾಡಿ ಆದೇಶ ನೀಡಿದ್ದಾರೆ.







