ಎಸ್‌ಡಿಪಿಐ ಮುಖಂಡ ಅಶ್ರಫ್ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ; ಐಜಿಪಿ ಹರಿಶೇಖರನ್

ಮಂಗಳೂರು, ಜೂ. 24: ಬೆಂಜನಪದವು ಎಂಬಲ್ಲಿ ಜೂ.21ರಂದು ದುಷ್ಕರ್ಮಿಗಳಿಂದ ಕೊಲೆಗೀಡಾಗಿರುವ ಎಸ್‌ಡಿಪಿಐ ಮುಖಂಡ ಮುಹಮ್ಮದ್ ಅಶ್ರಫ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿರುವುದಾಗಿ ಐಜಿಪಿ ಪಿ.ಹರಿಶೇಖರನ್ ತಿಳಿಸಿದ್ದಾರೆ.
ನಗರದ ಐಜಿಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕುಮ್ಡೇಲು ನಿವಾಸಿಗಳಾದ ಪವನ್ ಕುಮಾರ್ ಯಾನೆ ಪುಂಡ (24), ರಂಜಿತ್ (28), ತುಂಬೆಯ ಕನೆಮಾರು ಮನೆ ನಿವಾಸಿ ಸಂತೋಷ್ ಯಾನೆ ಸಂತು (23), ತುಂಬೆಯ ಬೊಳ್ಳಾರಿ ನಿವಾಸಿ ಶಿವಪ್ರಸಾದ್ ಆನೆ ಶಿವು (24), ತೆಂಕಬೆಳ್ಳೂರಿನ ಅಭಿನ್ ರೈ ಯಾನೆ ಅಭಿ (23) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಪಡುಬಿದ್ರೆಯಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 5 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಲಾಗಿದೆ ಎಂದರು.
ಪ್ರಕರಣದಲ್ಲಿ ಭರತ್ ಕುಮ್ಡೇಲು ಮತ್ತು ದಿವ್ಯರಾಜ್ ಶೆಟ್ಟಿ ಎಂಬವರು ಪ್ರಧಾನ ಆರೋಪಿಗಳಾಗಿದ್ದು, ಇವರ ಬಂಧನ ಇನ್ನಷ್ಟೇ ಆಗಬೇಕಿದೆ. ಈ ಆರೋಪಿಗಳು ಅಶ್ರಫ್ ಕೊಲೆಯ ರೂವಾರಿಗಳಾಗಿದ್ದಾರೆ. ಅಶ್ರಫ್ ಕೊಲೆಗೆ ಸಂಚು ರೂಪಿಸಲು ಆರೋಪಿಗಳ ತಂಡ ಒಂದು ತಿಂಗಳ ಹಿಂದೆ ಹಲವೆಡೆಗಳಲ್ಲಿ ಚರ್ಚಿಸಿ ಅಶ್ರಫ್‌ನ ಬಗ್ಗೆ ಮಾಹಿತಿಯನ್ನು ಕಲೆ ಹಾಕಿವೆ. ಬಳಿಕ ಜೂ. 21ರಂದು ಅಶ್ರಫ್ ಬೆಂಜನಪದವಿಗೆ ಬಂದಿರುವ ಬಗ್ಗೆ ಮಾಹಿತಿಯನ್ನು ಖಚಿತಪಡಿಸಿಕೊಂಡು ತಲವಾರು ಸಹಿತ ಮಾರಕಾಸ್ತ್ರಗಳಿಂದ ಬೆಂಜನಪದವಿಗೆ ಆಗಮಿಸಿ ಅಶ್ರಫ್‌ರವರ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಬಂಧಿತ ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾರೆ ಎಂದು ಐಜಿಪಿ ವಿವರಿಸಿದರು.
ಬಂಧಿತ ಆರೋಪಿಗಳ ಪೈಕಿ ಸಂತೋಷ್ ಯಾನೆ ಸಂತು ಎಂಬಾತನನ್ನು ಹೊರತುಪಡಿಸಿ ಇತರ ಆರೋಪಿಗಳ ಮೇಲೆ ಈ ಹಿಂದೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅಭಿನ್ ರೈ ಎಂಬಾತನ ಮೇಲೆ 2015ರಲ್ಲಿ ಟಿಪ್ಪು ಜಯಂತಿ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ಭಾಗಿಯಾದ ಪ್ರಕರಣ ದಾಖಲಾಗಿದೆ. ಶಿವಪ್ರಸಾದ್ ಎಂಬಾತ 2 ವರ್ಷಗಳ ಹಿಂದೆ ತುಂಬೆಯಲ್ಲಿ ನಡೆದ ಗಲಭೆ ಪ್ರಕರಣ ಸಹಿತ ಇತರ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ರಂಜಿತ್‌ನ ಮೇಲೆ ಎರಡು ಪ್ರಕರಣಗಳು ಹಾಗೂ ಪವನ್ ಎಂಬಾತ 2012ರಲ್ಲಿ ಮಸೀದಿಯೊಂದರಲ್ಲಿ ಹಂದಿ ತಲೆಯನ್ನಿಟ್ಟು ಎರಡು ಕೋಮುಗಳ ಮಧ್ಯೆ ಗಲಭೆ ಸೃಷ್ಟಿಸಲು ಹುನ್ನಾರ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿವೆ ಎಂದು ಐಜಿಪಿ ಹರಿಶೇಖರನ್ ಮಾಹಿತಿ ನೀಡಿದರು.
ಭರತ್ ಮತ್ತು ದಿವ್ಯರಾಜ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಆರೋಪಿಗಳು ಜೂ. 21ರಂದು ಅಶ್ರಫ್‌ರನ್ನು ಹಿಂಬಾಲಿಸಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿಗಳು ದ್ವಿಚಕ್ರ ವಾಹನಗಳಲ್ಲಿ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳ ಒಂದು ದ್ವಿಚಕ್ರ ವಾಹನದ ಕ್ಲಚ್ ಮುರಿದಿದ್ದರಿಂದ ಆ ವಾಹನವನ್ನು ಕೆಲವು ದೂರ ದೂಡಿಕೊಂಡು ಹೋಗಿರುತ್ತಾರೆ. ಕ್ಲಚ್ ಮುರಿದಿದ್ದರಿಂದ ಆರೋಪಿಗಳು ಎರಡು ತಂಡಗಳಾಗಿ ಬೇರೆ ಬೇರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳು ಕೊಲೆಗೆ ಬಳಸಿದ್ದ ನಾಲ್ಕು ಬೈಕ್‌ಗಳು ಮತ್ತು ತಲವಾರು, ಚಾಕುಗಳನ್ನು ವಶಕ್ಕೆ ಪಡೆದಿರುವುದಾಗಿ ಅವರು ತಿಳಿಸಿದರು.
ಉನೈದ್‌ನ ಮೇಲೆ ತಲವಾರು ಬೀಸಿದ ತಂಡ
ಬಂಧಿತ ಆರೋಪಿಗಳ ಪೈಕಿ ಶಿವಪ್ರಸಾದ್, ರಂಜಿತ್, ಸಂತೋಷ್ ಮತ್ತು ಪವನ್ ಅವರು ಜೂ.20ರಂದು ತುಂಬೆ ಗ್ರಾಮದ ಬೊಳ್ಳಾರಿಯ ಉಮರಬ್ಬ ಎಂಬವರ ಪುತ್ರ ಉನೈದ್ ಎಂಬವರ ಮೇಲೆ ತಲವಾರು ಬೀಸಿ ಕೊಲೆಗೆ ಯತ್ನಿಸಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ಶೀಘ್ರದಲ್ಲೇ ಇನ್ನಷ್ಟು ಆರೋಪಿಗಳ ಬಂಧನ: ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿದ್ದು, ಈ ಬಗ್ಗೆ ನಮಗೆ ಮಾಹಿತಿ ದೊರೆತಿವೆ. ಓರ್ವ ಆರೋಪಿಯನ್ನು ನಾಳೆ ಬಂಧಿಸಲಿದ್ದು, ಇನ್ನೋರ್ವನನ್ನು ಕೂಡ ಶೀಘ್ರದಲ್ಲೇ ಬಂಧಿಸಲಿದ್ದೇವೆ ಎಂದು ಐಜಿಪಿ ವಿಶ್ವಾಸ ವ್ಯಕ್ತಪಡಿಸಿದರು.
ಪೊಲೀಸ್ ತಂಡ ರಚನೆ: ಅಶ್ರಫ್ ಕೊಲೆಗೆ ಸಂಬಂಧಿಸಿ ಪೊಲೀಸ್ ತಂಡ ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿತ್ತು. ಆರೋಪಿಗಳ ಪತ್ತೆಗಾಗಿ ಪೊಲೀಸ್ ತಂಡ ಕೇರಳ ಗಡಿಭಾಗ, ಉಡುಪಿ, ಮಂಗಳೂರು, ಚಿಕ್ಕಮಗಳೂರು ಮತ್ತು ಬೆಂಗಳೂರು ಮೊದಲಾದ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಕೋಮುಗಲಭೆ ಉದ್ದೇಶ: ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕೋಮುಗಲಭೆ ನಡೆಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿರುವುದಾಗಿ ಐಜಿಪಿ ಹೇಳಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿಂದೆ ಕೋಮು ಘರ್ಷಣೆ ನಡೆಸುವ ಯತ್ನ ಅಡಗಿರುವುದು ಕಂಡುಬರುತ್ತಿದೆ. ಆರೋಪಿಗಳು ಯಾವ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎಂಬುದರ ಬಗ್ಗೆ ವಿಚಾರಣೆಯಿಂದಲೇ ಗೊತ್ತಾಲಿದೆ ಎಂದು ಐಜಿಪಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೊಲೆ ಪ್ರಕರಣದ ರೂವಾರಿ ಭರತ್ ಬಜರಂಗದಳದ ಮುಖಂಡ
ಕೊಲೆ ಪ್ರಕರಣದ ಪ್ರಧಾನ ಆರೋಪಿ ಪುದು ಗ್ರಾಮದ ಕುಮ್ಡೇಲು ನಿವಾಸಿ ಭರತ್ ಬಜರಂಗದಳದ ಜಿಲ್ಲಾ ಮುಖಂಡನಾಗಿದ್ದಾನೆ. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ರೊಂದಿಗೆ ಗುರುತಿಕೊಂಡಿದ್ದ ಭರತ್ ಇತ್ತೀಚೆಗೆ ನಗರದಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರಭಾಕರ್ ಭಟ್ ರೊಂದಿಗೆ ವೇದಿಕೆ ಹಂಚಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಅಶ್ರಫ್ ಕೊಲೆ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿರುವುದರಿಂದ ಕೊಲೆ ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್‌ರ ಪಾತ್ರದ ಬಗ್ಗೆ ಗುಮಾನಿ ವ್ಯಕ್ತವಾಗುತ್ತಿದೆ.







