ಅಶ್ರಫ್ ಹಂತಕರೊಂದಿಗೆ ಪ್ರಭಾಕರ ಭಟ್ ನಂಟು

ಮಂಗಳೂರು, ಜೂ.24: ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪುದು ಗ್ರಾಮದ ಕುಮ್ಡೆಲು ನಿವಾಸಿ ಭರತ್, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ರೊಂದಿಗೆ ಹತ್ತಿರದ ನಂಟು ಹೊಂದಿದ್ದಾನೆ ಎನ್ನಲಾಗಿದೆ.
ಕಲ್ಲಡ್ಕ ಗಲಭೆಗೆ ಸಂಬಂಧಿಸಿ ಮೇ 28ರಂದು ಮಂಗಳೂರಿನಲ್ಲಿ ಪ್ರಭಾಕರ್ ಭಟ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭರತ್ ಕುಮ್ಡೆಲು ವೇದಿಕೆ ಹಂಚಿಕೊಂಡಿದ್ದ. ಅಲ್ಲದೆ ಆರೆಸ್ಸೆಸ್ ಭರತ್‍ನನ್ನು ಬಂಟ್ವಾಳ ತಾಲೂಕು ಗೋ ಪ್ರಮುಖ್ ಆಗಿ ನೇಮಿಸಿದೆ. ಭರತ್ ಮತ್ತು ಪ್ರಭಾಕರ್ ಭಟ್ ಹತ್ತಿರದ ಸಂಬಧ ಹೊಂದಿರುವುದರಿಂದ ಅಶ್ರಫ್ ಕೊಲೆಯಲ್ಲಿ ಪ್ರಭಾಕರ್ ಭಟ್ ಪಾತ್ರವೂ ಇದೆ ಎಂಬ ಗುಮಾನಿ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಅಶ್ರಫ್ ಕೊಲೆ ಪ್ರಕರಣದ ಬಳಿಕ ಭರತ್ ಭೂಗತನಾಗಿದ್ದು, ಈತನಿಗೆ ಆರೆಸ್ಸೆಸ್ ಆಶ್ರಯ ನೀಡಿದೆ ಎಂಬ ಮಾತು ಬಂಟ್ವಾಳದಲ್ಲಿ ಕೇಳಿ ಬರುತ್ತಿದೆ.
ಬಜರಂಗದಳದಲ್ಲಿ ಗುರುತಿಸಿಕೊಂಡು ತಾಲೂಕು ಮತ್ತು ಜಿಲ್ಲಾ ಮಟ್ಟದ ವಿವಿಧ ನಾಯಕತ್ವ ಹುದ್ದೆಯನ್ನು ನಿರ್ವಹಿಸುತ್ತಿರುವ ಭರತ್, 2015ರ ಟಿಪ್ಪು ಜಯಂತಿ ಸಂದರ್ಭದಲ್ಲಿ ಬಂಟ್ವಾಳದಲ್ಲಿ ಗಲಾಟೆ, ಬಂಟ್ವಾಳ ತಾಲೂಕಿನ ವಿವಿಧೆಡೆ ದನ ಸಾಗಾಟಗಾರರ ಮೇಲೆ ಹಲ್ಲೆ, ಮಾರಿಪಳ್ಳದಲ್ಲಿ ಗಲಾಟೆ ಸಹಿತ ಬಂಟ್ವಾಳ ಗ್ರಾಮಾಂತರ ಮತ್ತು ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲವು ಕ್ರಿಮಿನಲ್ ಪ್ರಕರಣದ ಆರೋಪಿಯಾಗಿದ್ದಾನೆ. ಬಜರಂಗದಳದ ಮುಖಂಡ ಶರಣ್ ಪಂಪ್‍ವೆಲ್ ಮಾಲಕತ್ವದ ಸೆಕ್ಯುರಿಟಿ ಸಂಸ್ಥೆಯಲ್ಲಿ ಈತ ಕೆಲಸ ನಿರ್ವಹಿಸುತ್ತಿದ್ದಾನೆ.







