ಭಾರತಕ್ಕೆ 12,900 ಕೋಟಿ ರೂ. ಮೊತ್ತದ ಡ್ರೋನ್ ಮಾರಾಟಕ್ಕೆ ಅಮೆರಿಕ ಅಸ್ತು

ವಾಶಿಂಗ್ಟನ್, ಜೂ. 24: ಭಾರತಕ್ಕೆ ನಿರಾಯುಧ ನಿಗಾ ಡ್ರೋನ್‌ಗಳ ಮಾರಾಟಕ್ಕೆ ಅಮೆರಿಕದ ಟ್ರಂಪ್ ಆಡಳಿತ ಅನುಮೋದನೆ ನೀಡಿದೆ ಎಂದು ಅವುಗಳ ಉತ್ಪಾದಕ ಸಂಸ್ಥೆ ಜನರಲ್ ಆಟೊಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ ಶುಕ್ರವಾರ ತಿಳಿಸಿದೆ.
ಅಮೆರಿಕದಲ್ಲಿ ಉಭಯ ದೇಶಗಳ ನಾಯಕರ ಭೇಟಿಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ.
ತನ್ನ ಎರಡು ದಿನಗಳ ಅಮೆರಿಕ ಭೇಟಿಯ ವೇಳೆ, ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಶ್ವೇತಭವನದಲ್ಲಿ ಸೋಮವಾರ ಭೇಟಿಯಾಗಲಿದ್ದಾರೆ. ಮೋದಿಯ ಅಮೆರಿಕ ಭೇಟಿ ರವಿವಾರ ಆರಂಭಗೊಳ್ಳಲಿದೆ.
ಸಾಗರದ ಮೇಲೆ ನಿಗಾ ಇಡುವುದಕ್ಕಾಗಿ ತನಗೆ 22 ಗಾರ್ಡಿಯನ್ ಎಂಕ್ಯೂ-9ಬಿ ಮಾನವರಹಿತ ವಿಮಾನಗಳು ಬೇಕು ಎಂಬುದಾಗಿ ಭಾರತ ಕಳೆದ ವರ್ಷ ಬೇಡಿಕೆ ಸಲ್ಲಿಸಿತ್ತು. ಈಗ ಅದಕ್ಕೆ ಅನುಮೋದನೆ ದೊರೆತಿದ್ದು, ಇದು ಎರಡು ಬಿಲಿಯ ಡಾಲರ್ (ಸುಮಾರು 12,900 ಕೋಟಿ ರೂಪಾಯಿ) ಮೊತ್ತದ ಒಪ್ಪಂದ ಎಂದು ಹೇಳಲಾಗಿದೆ.
ಇದಕ್ಕೆ ಅಮೆರಿಕದ ಸಂಸತ್ತು ಕಾಂಗ್ರೆಸ್ ಇನ್ನಷ್ಟೇ ಅನುಮೋದನೆ ನೀಡಬೇಕಾಗಿದೆ.
‘‘ಭಾರತಕ್ಕೆ ಎಂಕ್ಯೂ-9ಬಿ ಗಾರ್ಡಿಯನ್ ವಿಮಾನಗಳ ಮಾರಾಟಕ್ಕೆ ಅಮೆರಿಕ ಸರಕಾರ ಅನುಮತಿ ನೀಡಿದೆ ಎಂಬುದನ್ನು ತಿಳಿಸಲು ನಮಗೆ ಸಂತೋಷವಾಗುತ್ತದೆ’’ ಎಂದು ಜನರಲ್ ಆಟೊಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್‌ನ ಸಿಇಒ ಲಿಂಡನ್ ಬ್ಲೂ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ







