ಪಂಟ: ನಿರ್ದೇಶಕನ ಸೋಲು

ಎರಡು ವರ್ಷಗಳ ಹಿಂದೆ ತೆರೆಕಂಡ ‘ರಾಜತಂದಿರಮ್’ ತಮಿಳು ಸಿನೆಮಾದ ರೀಮೇಕ್ ಪಂಟ’. ಅಪರೂಪದ ಕಥಾಹಂದರವಿದ್ದ ಆ್ಯಕ್ಷನ್-ಥ್ರಿಲ್ಲರ್ ತಮಿಳಿನಲ್ಲಿ ಯಶಸ್ಸು ಕಂಡಿತ್ತು. ಅದನ್ನು ಕನ್ನಡಕ್ಕೆ ಯಥಾವತ್ತಾಗಿ ತರುವಲ್ಲಿಯೂ ನಿರ್ದೇಶಕ ಎಸ್.ನಾರಾಯಣ್ ಸೋತಿದ್ದಾರೆ. ಥ್ರಿಲ್ಲರ್ ಕತೆಗೆ ಅಗತ್ಯವಿದ್ದ ವೇಗ, ಸಂಘರ್ಷ, ಸಂಕಲನ ಇಲ್ಲಿಲ್ಲ. ಎಸ್.ನಾರಾಯಣ್ ಹಿಂದೆ ತಮಿಳಿನ ಸೆಂಟಿಮೆಂಟ್ ಸಿನೆಮಾಗಳನ್ನು ಕನ್ನಡಕ್ಕೆ ರಿಮೇಕ್ ಮಾಡಿ ಯಶಸ್ಸು ಕಂಡಿದ್ದರು.
ಈಗ ಥ್ರಿಲ್ಲರ್ ಮಾದರಿ ಚಿತ್ರದ ನಾಡಿಮಿಡಿತ ಹಿಡಿಯುವಲ್ಲಿ ಅವರು ಎಡವಿದ್ದಾರೆ. ಉತ್ತಮ ಚಿತ್ರವಾಗಬಹುದಾಗಿದ್ದ ಇದು ಸಾಧಾರಣ ಪ್ರಯೋಗ ಎನಿಸಿಕೊಂಡಿದೆ. ಅರ್ಜುನ್ ಮತ್ತು ಆತನ ಇಬ್ಬರು ಗೆಳೆಯರು ಚಿಕ್ಕಪುಟ್ಟ ಕಳ್ಳತನ ಮಾಡಿಕೊಂಡಿರುವ ಯುವಕರು. ಬದುಕಿನ ತಿರುವೊಂದರಲ್ಲಿ ಅರ್ಜುನ್‌ಗೆ ಗೆಳತಿ ಸಿಗುತ್ತಾಳೆ. ಆಕೆಯ ಕಷ್ಟಕ್ಕೆ ಮರುಗುವ ಅವನು ಗೆಳೆಯರಿಬ್ಬರೊಡಗೂಡಿ ದೊಡ್ಡ ಒಡವೆ ಅಂಗಡಿ ದೋಚಲು ಸ್ಕೆಚ್ ಹಾಕುತ್ತಾನೆ. ಒಡವೆ ಅಂಗಡಿ ಮಾಲಕನಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿಯೇ ಇವರು ದರೋಡೆಗಿಳಿಯುತ್ತಾರೆ ಎನ್ನುವುದು ವಿಶೇಷ! ಅಮಾಯಕ ಜನರ ಫೈನಾನ್ಸ್ ದುಡ್ಡು ದೋಚಿದ ಒಡವೆ ಅಂಗಡಿ ಮಾಲಕನಿಗೆ ಪಾಠ ಕಲಿಸುವುದೂ ಈ ಮಾಸ್ಟರ್‌ಪ್ಲಾನ್ ಹಿಂದಿರುತ್ತದೆ. ಇಂಥದ್ದೊಂದು ಅಪರೂಪವೇ ಎನ್ನಬಹುದಾದ ಥ್ರಿಲ್ಲರ್ ಕತೆಯನ್ನು ನಾರಾಯಣ್ ತೆರೆಯ ಮೇಲೆ ಸಾಧಾರಣವಾಗಿ ನಿರೂಪಿಸುತ್ತಾರೆ.
ಹೀರೋ ಅನೂಪ್ ತಮ್ಮ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಪಾತ್ರವನ್ನು ಅಂಡರ್ ಪ್ಲೇ ಮಾಡುತ್ತಲೇ ನೋಡುಗರಿಗೆ ಹತ್ತಿರವಾಗುತ್ತಾರೆ. ಅವರಿಬ್ಬರು ಸ್ನೇಹಿತರ ಪಾತ್ರಧಾರಿಗಳೂ ಒಳ್ಳೆಯ ಸಾಥ್ ನೀಡಿದ್ದಾರೆ. ನಾಯಕಿ ರಿತೀಕ್ಷಾಗೆ ಇದು ಮೊದಲ ಸಿನೆಮಾ. ಅವರು ಕೂಡ ಪಾತ್ರದ ಹದವರಿತು ಅಚ್ಚುಕಟ್ಟಾಗಿ ನಟಿಸಿದ್ದಾರೆ. ನಾರಾಯಣ್ ಅವರೇ ಸಂಗೀತ ಸಂಯೋಜಿಸಿದ್ದು, ಹಾಡುಗಳೇನೂ ನೆನಪಿನಲ್ಲುಳಿಯುವಂತಿಲ್ಲ. ಐಟಂ ಹಾಡಿಗೆಂದೇ ತಿಥಿ’ ಸಿನೆಮಾ ಖ್ಯಾತಿಯ ಸೆಂಚೂರಿ ಗೌಡ ಮತ್ತು ಗಡ್ಡಪ್ಪ ಅವರನ್ನು ಕರೆತಂದಿರುವುದು ಅಭಿರುಚಿಯ ದಾರಿದ್ರ್ಯವಲ್ಲದೆ ಮತ್ತೇನೂ ಅಲ್ಲ. ಉತ್ತಮ ಕತೆಯೊಂದು ಕೆಟ್ಟ ನಿರ್ದೇಶನದಿಂದ ಸೊರಗಿದೆ ಎಂದು ಹೇಳಬಹುದು.
ನಿರ್ದೇಶನ:
ಎಸ್.ನಾರಾಯಣ್, ನಿರ್ಮಾಣ: ಕೆ.ಸುಬ್ರಹ್ಮಣ್ಯಂ, ಸಂಗೀತ: ಎಸ್.ನಾರಾಯಣ್, ಛಾಯಾಗ್ರಹಣ: ಮ್ಯಾಥ್ಯೂ ರಾಜನ್ ತಾರಾಗಣ: ಅನೂಪ್ ರೇವಣ್ಣ, ರಿತೀಕ್ಷಾ, ರವಿ ಕಾಳೆ, ಕರಿಸುಬ್ಬು, ಇರ್ಫಾನ್ ಮತ್ತಿತರರು.
ರೇಟಿಂಗ್ - **
* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ







