ಕಾರ್ಡ್ ಬಳಸಿದರೆ ಜೇಬಿಗೆ ಕತ್ತರಿ !
ವಿವರಗಳಿಗೆ ಕ್ಲಿಕ್ ಮಾಡಿ

ಹೊಸದಿಲ್ಲಿ, ಜೂ.25: ಕೇಂದ್ರ ಸರಕಾರ ಡಿಜಿಟಲ್ ಪಾವತಿ ಜನಪ್ರಿಯಗೊಳಿಸಲು ಒಂದೆಡೆ ಕಸರತ್ತು ಮಾಡುತ್ತಿದ್ದರೆ, ಇನ್ನೊಂದೆಡೆ ದೇಶದ ಎಲ್ಲೆಡೆ ಸಣ್ಣ ಪಟ್ಟಣಗಳಲ್ಲಿ ಅಂಗಡಿಗಳ ಮಾಲಕರು, ಕಾರ್ಡ್‌ನಲ್ಲಿ ಪಾವತಿ ಮಾಡುವ ಗ್ರಾಹಕರಿಗೆ ಕಾನೂನುಬಾಹಿರವಾಗಿ ಶುಲ್ಕ ವಿಧಿಸುತ್ತಿರುವ ನಿದರ್ಶನಗಳು ಬೆಳಕಿಗೆ ಬಂದಿವೆ.
ಕಾರ್ಡ್ ಸ್ವೈಪ್ ಮಾಡುವ ಸಾಧನವನ್ನು ಬ್ಯಾಂಕ್‌ಗಳಿಂದ ಪಡೆಯುವ ವೇಳೆ ವ್ಯಾಪಾರಿಗಳು ಈ ವ್ಯವಸ್ಥೆಯ ಮೇಲೆ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂಬ ಷರತ್ತಿಗೆ ಒಪ್ಪಿರುತ್ತಾರೆ. ಇದನ್ನು ಉಲ್ಲಂಘಿಸಿ ಗ್ರಾಹಕರಿಗೆ ಶುಲ್ಕ ವಿಧಿಸಲಾಗುತ್ತಿದೆ.
ಕೆಲ ದೊಡ್ಡ ನಗರಗಳಲ್ಲೂ ಈ ಹೊರೆಯನ್ನು ಗ್ರಾಹಕರ ಮೇಲೆ ವಿಧಿಸಲಾಗುತ್ತಿದೆ ಎಂದು ವ್ಯಾಪಾರಿ ಸಂಘಟನೆಗಳು ಹೇಳುತ್ತವೆ. ಈ ಬಗ್ಗೆ ಅಧಿಕೃತ ಅಂಕಿ ಅಂಶ ಇಲ್ಲವಾದರೂ, ಈ ದಂಧೆ ಹೆಚ್ಚುತ್ತಿದೆ ಎಂದು ಸ್ಪಷ್ಟಪಡಿಸುತ್ತಾರೆ.
"ಡಿಜಿಟಲ್ ಪಾವತಿಯನ್ನು ಅಳವಡಿಸಿಕೊಳ್ಳಲು ಇರುವ ದೊಡ್ಡ ತಡೆ ಎಂದರೆ, ವರ್ಗಾವಣೆ ಶುಲ್ಕ. ಈ ಬಗ್ಗೆ ನಮಗೆ ಅರಿವು ಇದೆ. ವ್ಯಾಪಾರಿಗಳಿಗಾಗಲೀ, ಗ್ರಾಹಕರಿಗಾಗಲೀ ಇದು ಹೊರೆಯಾಗಬಾರದು" ಎಂದು ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳುತ್ತಾರೆ.
ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಎಂದು ಕರೆಯಲಾಗುವ ಈ ಶುಲ್ಕ, ಹಣ ವರ್ಗಾವಣೆಯ ಬ್ಯಾಂಕ್‌ಗಳು, ಸ್ವೈಪ್ ಸಾಧನ ಅಳವಡಿಸಿಕೊಂಡ ಮಳಿಗೆ ಹಾಗೂ ಪೇಮೆಂಟ್ ಗೇಟ್‌ವೇ ಕಂಪನಿಗಳ ನಡುವೆ ಹಂಚಿಕೆಯಾಗುತ್ತವೆ. ಡೆಬಿಟ್ ಕಾರ್ಡ್ ಬಳಕೆಯ ಮೇಲಿನ ಎಂಡಿಆರ್ ದರದ ಮೇಲೆ ಆರ್‌ಬಿಐ 1000 ರೂಪಾಯಿವರೆಗಿನ ವಹಿವಾಟಿಗೆ ಶೇಕಡ 0.5 ಗರಿಷ್ಠ ಮಿತಿ ವಿಧಿಸಿದೆ. 2000 ರೂಪಾಯಿವರೆಗಿನ ವಹಿವಾಟಿಗೆ ಶೇಕಡ 0.75 ಹಾಗೂ ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಶೇಕಡ 1ರಷ್ಟು ಎಂಡಿಆರ್ ವಿಧಿಸಬಹುದು. ಆದರೆ ಬ್ಯಾಂಕುಗಳು ಸಾಮಾನ್ಯವಾಗಿ ಶೇಕಡ 2ರಷ್ಟು ಅಧಿಕ ಶುಲ್ಕ ವಸೂಲಿ ಮಾಡುತ್ತಿವೆ.
ನೋಟು ರದ್ದತಿ ಬಳಿಕ ಎಂಡಿಆರ್ ರದ್ದುಪಡಿಸಿದ್ದರೂ, ಕಾರ್ಡ್ ಪಾವತಿಗೆ ಶೇಕಡ 2ರಷ್ಟು ಶುಲ್ಕವನ್ನು ಗ್ರಾಹಕರಿಗೆ ವಿಧಿಸುವ ವ್ಯವಸ್ಥೆ ಮುಂದುವರಿದಿದೆ. ಜತೆಗೆ ವ್ಯಾಪಾರಿಗಳು ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಗ್ರಾಹಕರಿಗೆ ಈ ಶುಲ್ಕ ವಿಧಿಸದಿದ್ದರೆ, ನಾವು ಈ ಶುಲ್ಕ ಭರಿಸಬೇಕಾಗುತ್ತದೆ ಎನ್ನುವುದು ವ್ಯಾಪಾರಿಗಳ ವಾದ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ಅಥವಾ ಕೇಂದ್ರ ಸರಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ







