ಗುಜರಾತ್ ಕಾಂಗ್ರೆಸ್‌ಗೆ ವಘೇಲಾ ಶಾಕ್

ಗಾಂಧಿನಗರ, ಜೂ.25: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆ ಸೆಣಸಿಗೆ ಸಜ್ಜಾಗದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಶಂಕರಸಿನ್ಹ ವಘೇಲಾ, ಪಕ್ಷದಿಂದ ಹೊರನಡೆಯುವ ಸೂಚನೆ ನೀಡಿದ್ದಾರೆ.
"2017ರ ಚುನಾವಣೆಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಒಂದು ವರ್ಷದಿಂದ ಪಕ್ಷದ ಹೈಕಮಾಂಡ್‌ಗೆ ಆಗ್ರಹಿಸುತ್ತಲೇ ಬಂದಿದ್ದೇನೆ, ಪಾಟಿದಾರ, ದಲಿತ, ಇತರ ಹಿಂದುಳಿದ ವರ್ಗಗಳ ಅಶಾಂತಿಯಿಂದಾಗಿ ಪಕ್ಷಕ್ಕೆ ಅನುಕೂಲಕರ ವಾತಾವರಣವಿದೆ. ಆದರೆ ಇದುವರೆಗೂ ಯಾವ ಸಿದ್ಧತೆಯನ್ನೂ ಪಕ್ಷ ಮಾಡಿಕೊಂಡಿಲ್ಲ" ಎಂದು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಪಕ್ಷದ ಕೇಂದ್ರ ನಾಯಕತ್ವ ವಿರುದ್ಧ ಕಿಡಿ ಕಾರಿದ್ದಾರೆ.
"ದಿಲ್ಲಿವಾಲಾಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುತ್ತಿದೆ ಎನ್ನುವುದು ಗೊತ್ತಿದೆಯೇ? ಉತ್ತರಪ್ರದೇಶದಲ್ಲಿ ಹೀನಾಯವಾಗಿ ಸೋತಿದ್ದೀರಿ. ಈಗಲಾದರೂ ಗುಜರಾತ್ ಗೆಲುವಿಗೆ ಕಾರ್ಯತಂತ್ರ ರೂಪಿಸಿ. ಪಕ್ಷದ ಮುಖಂಡರಿಗೆ ಗೊತ್ತು- ಗುರಿ ಇಲ್ಲ" ಎಂದು ಚಾಟಿ ಬೀಸಿದ್ದಾರೆ.
"ನಮ್ಮ ಭಾವನೆಗಳನ್ನು ತಿಳಿಸುವ ಸಲುವಾಗಿ ಜುಲೈ ಮೊದಲ ವಾರ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡುತ್ತೇನೆ. ಕಾಂಗ್ರೆಸ್ ಆತ್ಮಹತ್ಯೆಯ ದಾರಿಯಲ್ಲಿ ಮುನ್ನಡೆಯುತ್ತಿದೆ. ಮುಂದೆ ದೊಡ್ಡ ಹೊಂಡವಿದೆ. ಅದನ್ನು ನೋಡಲು ಬಯಸದೇ ಅದಕ್ಕೆ ಬೀಳುತ್ತಾರೆ ಎಂದಾದರೆ ಬೀಳಲಿ. ನಾನು ಮಾತ್ರ ಹೊಂಡಕ್ಕೆ ಬೀಳುವುದಿಲ್ಲ. ಈಗಲಾದರೂ ದಿಲ್ಲಿ ಮುಖಂಡರು ತಕ್ಷಣ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
"ಸೋನಿಯಾಗಾಂಧಿ ನನ್ನನ್ನು ಗುಜರಾತ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡುವಾಗ, ಆರೆಸ್ಸೆಸ್, ಜನಸಂಘ ಹಾಗೂ ಬಿಜೆಪಿ ವ್ಯಕ್ತಿ ಎಂಬ ಹಣೆಪಟ್ಟಿ ಇದ್ದರೂ ನಿಮ್ಮ ಮೇಲೆ ವಿಶ್ವಾಸ ಇಟ್ಟಿದ್ದೇನೆ ಎಂದು ಹೇಳಿದ್ದರು. ಪಕ್ಷದಲ್ಲಿ ಇರುವವರೆಗೂ ಈ ವಿಶ್ವಾಸ ಉಳಿಸಿಕೊಳ್ಳುವುದಾಗಿ ಹೇಳಿದ್ದೆ. ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಒಂದು ಗಂಟೆ ಕಾಲ ಚರ್ಚಿಸಿದ್ದೆ. ಅವರಿಗೆ ಕೃತಜ್ಞತೆ ಹೇಳಿ, ಇದುವರೆಗೆ ನನ್ನ ವಿಶ್ವಾಸವನ್ನು ಉಳಿಸಿಕೊಂಡಿದ್ದೇನೆ. ಇಲ್ಲಿಗೆ ಅದು ಮುಗಿಯುತ್ತದೆ" ಎಂದು ಹೇಳುವ ಮೂಲಕ ಪಕ್ಷದಿಂದ ನಿರ್ಗಮಿಸುವ ಸುಳಿವು ನೀಡಿದ್ದಾರೆ.







