ತೈಲ ಟ್ಯಾಂಕರ್‌ಗೆ ಬೆಂಕಿ: 100ಕ್ಕೂ ಅಧಿಕ ಮಂದಿ ಮೃತ

ಲಾಹೋರ್, ಜೂ.25: ಪಾಕಿಸ್ತಾನದ ಪಂಜಾಬ್ ಪ್ರಾಂತದ ಬಹಾವಲ್‌ಪುರ ಸಿಟಿಯಲ್ಲಿ ರವಿವಾರ ಬೆಳಗ್ಗೆ ತೈಲ ಟ್ಯಾಂಕರ್‌ವೊಂದಕ್ಕೆ ಹತ್ತಿಕೊಂಡ ಬೆಂಕಿಗೆ ಕನಿಷ್ಠ 100 ಮಂದಿ ಸಾವನ್ನಪ್ಪಿದ್ದು, ಇತರ 70 ಜನರು ಗಾಯಗೊಂಡಿದ್ದಾರೆ.
ಬಹಾವಲ್‌ಪುರದ ಅಹ್ಮದ್‌ಪುರ್‌ನ ಶಾರ್ಕಿಯಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ಯಾಂಕರ್‌ವೊಂದು ಸ್ಕಿಡ್ ಆಗಿ ಮಗುಚಿ ಬಿದ್ದ ಪರಿಣಾಮ ಬೆಂಕಿ ಹತ್ತಿಕೊಂಡಿತು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ವೇಗವಾಗಿ ಚಲಿಸುತ್ತಿದ್ದ ತೈಲ ಟ್ಯಾಂಕರ್ ತಿರುವಿನಲ್ಲಿ ಮಗುಚಿ ಬಿದ್ದಿದೆ. ತೈಲ ಟ್ಯಾಂಕರ್ ಬಿದ್ದ ತಕ್ಷಣ ಗ್ರಾಮಸ್ಥರು ಸೋರಿಕೆಯಾಗುತ್ತಿದ್ದ ತೈಲ ಸಂಗ್ರಹಕ್ಕೆ ಮುಗಿಬಿದ್ದರು. ಈ ವೇಳೆ ಏಕಾಏಕಿ ಹತ್ತಿಕೊಂಡ ಬೆಂಕಿಗೆ 100ಕ್ಕೂ ಅಧಿಕ ಜನರು ಸಜೀವ ದಹನವಾಗಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಸತ್ತವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.
ಘಟನೆ ನಡೆದ ತಕ್ಷಣ ಎರಡು ಅಗ್ನಿಶಾಮಕ ಯಂತ್ರಗಳು ಸ್ಥಳಕ್ಕೆ ಧಾವಿಸಿವೆೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಕನಿಷ್ಠ 6 ಕಾರುಗಳು ಹಾಗೂ 12 ಮೋಟಾರ್‌ಸೈಕಲ್‌ಗಳು ಭಸ್ಮವಾಗಿವೆ ಎಂದು 'ಡಾನ್' ನ್ಯೂಸ್ ವರದಿ ಮಾಡಿದೆ.





