ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

ವಾಷಿಂಗ್ಟನ್, ಜೂ.25: ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮೊದಲ ಬಾರಿ ಮಾತುಕತೆ ನಡೆಸಲು ರವಿವಾರ ವಾಷಿಂಗ್ಟನ್‌ಗೆ ಆಗಮಿಸಿದ್ದು ಅಮೆರಿಕನ್ ಭಾರತೀಯರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಮೋದಿ ವಾಸ್ತವ್ಯ ಹೂಡಲಿರುವ ಹೊಟೇಲ್‌ನ ಹೊರಗೆ ಕಾಯುತ್ತಿದ್ದ ಅಮೆರಿಕದಲ್ಲಿರುವ ಭಾರತೀಯರು ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮೋದಿ ವಾಹನದಿಂದ ಹೊರಗೆ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಭಾರತೀಯರು ಮೋದಿ, ಮೋದಿ ಎಂದು ಜೈಕಾರ ಹಾಕಿದರು.
ಮೂರು ದಿನಗಳ ಅಮೆರಿಕ ಭೇಟಿಯಲ್ಲಿರುವ ಪ್ರಧಾನಿ ಮೋದಿ ಅಮೆರಿಕದ ಪ್ರಮುಖ 20 ಸಿಇಒಗಳೊಂಂದಿಗೆ ಸಂವಹನ ನಡೆಸಲಿದ್ದು, ವಾಷಿಂಗ್ಟನ್ ಡಿಸಿ ಉಪನಗರ ವರ್ಜಿನಿಯದಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾರತ ಮೂಲದ 600ಕ್ಕೂ ಸದಸ್ಯರು ಭಾಗವಹಿಸುವ ಸಾಧ್ಯತೆಯಿದೆ.
ಟ್ರಂಪ್ ಸೋಮವಾರ ಬೆಳಗ್ಗೆ ವೈಟ್‌ಹೌಸ್‌ನಲ್ಲಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಈ ಇಬ್ಬರು ನಾಯಕರು ಐದು ಗಂಟೆಗಳ ಕಾಲ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ.







