ಈದುಲ್ ಫಿತ್ರ್ ಗೆ ಶಾಲಾ ಮಕ್ಕಳಿಗೆ ಮೆಹೆಂದಿ ನಿಷೇಧ: ನಿರ್ಧಾರ ಕೈ ಬಿಟ್ಟ ಉಡುಪಿ ಸೈಲಸ್ ಇಂಟರ್ ನ್ಯಾಶನಲ್ ಸ್ಕೂಲ್

ಉಡುಪಿ, ಜೂ.25: ಈದುಲ್ ಫಿತ್ರ್ ಹಬ್ಬಕ್ಕೆ ಮಕ್ಕಳು ಮೆಹೆಂದಿ ಹಚ್ಚಿಕೊಳ್ಳುವುದನ್ನು ನಿಷೇಧಿಸಿರುವ ಉಡುಪಿ ಸೈಲಸ್ ಇಂಟರ್‌ನ್ಯಾಶನಲ್ ಸ್ಕೂಲ್ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿ ಇಂದು ಈ ನಿರ್ಧಾರವನ್ನು ಕೈಬಿಟ್ಟು ಹಬ್ಬಕ್ಕೆ ಮೆಹೆಂಂದಿ ಹಚ್ಚಿಕೊಳ್ಳಲು ಅವಕಾಶ ನೀಡಿದೆ.
ಇಂದು ಶಾಲಾ ಆಡಳಿತ ಮಂಡಳಿ ಪಾಲಕರಿಗೆ " ಧಾರ್ಮಿಕ ಭಾವನೆಯ ಹಿನ್ನೆಲೆಯಲ್ಲಿ ಈ ಬಾರೀ ಈದುಲ್ ಫಿತ್ರ್ ಗೆ ಮೆಹೆಂದಿ ಹಚ್ಚಿಕೊಳ್ಳಲು ಅನುಮತಿ ನೀಡಲಾಗಿದೆ. ಆದರೆ ಮತ್ತೇ ಬೇರೆ ದಿನಗಳಲ್ಲಿ ಮೆಹಂದಿ ಹಚ್ಚಿಕೊಳ್ಳಬೇಕಾದರೆ ಪ್ರಾಂಶುಪಾಲರ ಅನುಮತಿಯನ್ನು ಪಡೆದುಕೊಳ್ಳಬೇಕು" ಎಂದು ಸಂದೇಶ ಕಳುಹಿಸಿದೆ.
ಜೂ.24ರಂದು ಈದ್ ಫಿತ್ರ್ ಗೆ ಮಕ್ಕಳು ಮೆಹೆಂದಿ ಹಚ್ಚಿಕೊಳ್ಳುವುದನ್ನು ಉಡುಪಿಯ ಖಾಸಗಿ ಶಾಲೆ ಉಡುಪಿ ಸೈಲಸ್ ಇಂಟರ್‌ನ್ಯಾಶನಲ್ ಸ್ಕೂಲ್ ನಿಷೇಧಿಸಿತ್ತು. ಹಾಗೂ ಮೆಹಂದಿ ಹಚ್ಚಿಕೊಂಡು ಶಾಲೆಗೆ ಬಂದರೆ ದಂಡ ವಿಧಿಸುವುದಾಗಿ ಪಾಲಕರಿಗೆ ಮೊಬೈಲ್ ಸಂದೇದಲ್ಲಿ ರವಾನಿಸಲಾಗಿತ್ತು. ಇದು ಪಾಲಕರು ಹಾಗೂ ಸಂಘಟನೆಗಳನ್ನು ಆಕ್ರೋಶಕ್ಕೀಡು ಮಾಡಿತ್ತು.
ಈ ಬಗ್ಗೆ "ವಾರ್ತಾಭಾರತಿ" ವರದಿಯನ್ನು ಪ್ರಕಟಿಸಿತ್ತು.





