ವಿದ್ಯಾರ್ಥಿಗಳಿಗೆ ಶಿಕ್ಷಕಿ ನೀಡಿದ ಹೋಂವರ್ಕ್ ಕೇಳಿದರೆ ಬೆಚ್ಚಿಬೀಳೋದು ಗ್ಯಾರಂಟಿ

ಲಂಡನ್, ಜೂ.25: ಲಂಡನ್‌ನ ಇಂಗ್ಲೀಷ್ ಶಿಕ್ಷಕಿಯೊಬ್ಬರು ಶೇಕ್ಸ್‌ಪಿಯರ್‌ನ ದುರಂತ ನಾಟಕ ಮೆಕ್‌ಬೆತ್ ಪಾಠದ ಭಾಗವಾಗಿ 60 ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ಪತ್ರವನ್ನು ಬರೆದು ತರುವಂತೆ ಹೋಮ್ ವರ್ಕ್ ನೀಡಿದ್ದಾರೆ.
ಲಂಡನ್‌ನ ಥಾಮಸ್ ತಾಲ್ಲಿಸ್ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಕಿಯು ಡೆತ್ ನೋಟನ್ನು ಬರೆದು ತರುವಂತೆ ಹೇಳಿರುವ ನಿರ್ಧಾರದಿಂದ ವಿದ್ಯಾರ್ಥಿಗಳ ಹೆತ್ತವರು ಕೆಂಡಾಮಂಡಲವಾಗಿದ್ದಾರೆ. ಶಿಕ್ಷಕಿಯ ಈ ಹೋಮ್‌ವರ್ಕ್‌ನಿಂದ ನಮ್ಮ ಮಕ್ಕಳ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲವು ಹೆತ್ತವರು ಅವಲತ್ತುಕೊಂಡಿದ್ದಾರೆ.
ಶಾಲೆಯ ಶಿಕ್ಷಕಿಗೆ ಸೂಕ್ಷ್ಮತೆಯ ಅರಿವಿಲ್ಲದಿರುವ ಬಗ್ಗೆ, ಮೂರ್ಖತನದ ನಿರ್ಧಾರದ ಟೀಕೆ ವ್ಯಕ್ತಪಡಿಸಿರುವ ಹೆತ್ತವರು ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕಿಗೆ ದೂರು ನೀಡಿದ್ದಾರೆ. ಭೋದಕ ಸಿಬ್ಬಂದಿಯನ್ನು ಸಂಪರ್ಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯ ಶಿಕ್ಷಕಿ ಭರವಸೆ ನೀಡಿದ್ದಾರೆ.
ನನ್ನ ಮಗಳಿಗೆ ಆತ್ಮಹತ್ಯೆಯ ಬಗ್ಗೆ ಸ್ವತಹ ಅನುಭವವಾಗಿದ್ದು, ಆಕೆಯ ಮೂವರು ಗೆಳತಿಯರು ಸುಸೈಡ್ ಮಾಡಿಕೊಂಡಿದ್ದಾರೆ. ಟೀಚರ್ ಸುಸೈಡ್ ನೋಟ್ ಬರೆದುಕೊಂಡು ಬರಲು ಹೇಳಿರುವುದಕ್ಕೆ ನನ್ನ ಮಗಳು ತೀವ್ರ ನೊಂದಿದ್ದಾಳೆ ಎಂದು ವಿದ್ಯಾರ್ಥಿನಿಯ ತಾಯಿಯೊಬ್ಬರು ತಿಳಿಸಿದ್ದಾರೆ.
ಶಿಕ್ಷಣ ವ್ಯವಸ್ಥೆ ಇಷ್ಟೊಂದು ಪ್ರಮಾಣದಲ್ಲಿ ಸೂಕ್ಷ್ಮತೆ ಕಳೆದುಕೊಂಡಿದೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ. ಬಾಲ್ಯದಲ್ಲಿ ಹಾಗೂ ಹದಿಹರೆಯದಲ್ಲಿ ಆತಂಕವೆನ್ನುವುದು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂದು ಇನ್ನೋರ್ವ ಹೆತ್ತವರು ಹೇಳಿದ್ದಾರೆ.







