ಕಲ್ಲಡ್ಕ ಪ್ರಭಾಕರ ಭಟ್ ವಿಚಾರದಲ್ಲಿ ನಿಜವಾಯ್ತು ಕಾಂಗ್ರೆಸ್ ಆರೋಪ: ಸಚಿವ ಖಾದರ್

ಮಂಗಳೂರು, ಜೂ.25: ಬಂಟ್ವಾಳ ತಾಲೂಕಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕಾರಣ ಎಂಬ ಕಾಂಗ್ರೆಸ್ ಆರೋಪ ನಿಜವಾಗಿದೆ. ರಿಕ್ಷಾ ಚಾಲಕ ಅಶ್ರಫ್‌ರವರ ಕೊಲೆ ಪ್ರಕರಣದ ಮೂಲಕ ಕಾಂಗ್ರೆಸ್‌ನ ಆರೋಪಕ್ಕೆ ಸಾಕ್ಷ ದೊರಕಿದೆ ಎಂದು ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಶ್ರಫ್‌ರವರ ಕೊಲೆಗೆ ಕೆಲವು ದಿನಗಳ ಹಿಂದೆ ಪ್ರಭಾಕರ್ ಭಟ್‌ರವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಶ್ರಫ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಾಣಿಸಿಕೊಂಡಿರುವುದು ಈ ಆರೋಪಕ್ಕೆ ಪುಷ್ಟಿ ನೀಡಿದೆ ಎಂದರು.
ಅಂದು ಕಲ್ಲಡ್ಕ ಪ್ರಭಾಕರ ಭಟ್ ಕಲ್ಲಡ್ಕ ಗಲಭೆಗೆ ಸಂಬಂಧಿಸಿ ಪತ್ರಿಕಾಗೋಷ್ಠಿ ನಡೆಸಿದ್ದರು. ಆ ಬಳಿಕ ಅಶ್ರಫ್ ಕೊಲೆ ನಡೆದಿದೆ. ಅಮಾಯಕರಾಗಿದ್ದ ಅಶ್ರಫ್ ಕೊಲೆ ಯಾವುದೇ ಪೂರ್ವ ದ್ವೇಷ ಇಲ್ಲದೆ ನಡೆದಿರುವಂತದ್ದು ಎಂದು ಪೊಲೀಸರು ಹೇಳಿದ್ದಾರೆ. ಆದ್ದರಿಂದ ಕೊಲೆಯ ಪ್ರಧಾನ ಆರೋಪಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಹಿನ್ನೆಲೆಯ ಕುರಿತು ಇದೀಗ ಪೊಲೀಸರು ತನಿಖೆ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
ರಿಕ್ಷಾ ಚಾಲಕ ಅಶ್ರಫ್‌ರವರನ್ನು ವಿಕಲಚೇತನರಾದ ಶೀನ ಪೂಜಾರಿಯವರು ನೆಚ್ಚಿಕೊಂಡಿದ್ದರು. ತಮ್ಮ ಸಾಮಗ್ರಿಗಳನ್ನು ಖುದ್ದಾಗಿ ಅಶ್ರಫ್‌ರವರೇ ರಿಕ್ಷಾದಲ್ಲಿರಿಸಿ ಶೀನ ಪೂಜಾರಿಗೆ ಸಹಕರಿಸುವಂತಹ ಸೇವಾ ಮನೋಭಾವದಿಂದಾಗಿ ಶೀನ ಪೂಜಾರಿಯವರು ಅಶ್ರಫ್‌ರನ್ನೇ ರಿಕ್ಷಾ ಪ್ರಯಾಣಕ್ಕಾಗಿ ಕರೆಸಿಕೊಳ್ಳುತ್ತಿದ್ದರು. ಅಂತಹ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಮುಖ ಆರೋಪಿ ಪ್ರಭಾಕರ ಭಟ್ ಜತೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದುದು ಹಲವಾರು ಸಂಶಗಳನ್ನು ಹುಟ್ಟು ಹಾಕುತ್ತದೆ ಎಂದು ಸಚಿವ ಖಾದರ್ ನುಡಿದರು.
ರಾಜಕೀಯ ವ್ಯಕ್ತಿಗಳು ಸಾರ್ವಜನಿಕ ಅಥವಾ ಖಾಸಗಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಂದರ್ಭ ಅವರ ಜತೆ ನೂರಾರು ಜನರು ಮಾತನಾಡಿ, ಕೈ ಮಿಲಾಯಿಸಿ ಫೋಟೋ ತೆಗೆಸಿಕೊಳ್ಳುತ್ತಾರೆ. ಆದರೆ ಧಾರ್ಮಿಕ ಮುಖಂಡನೆಂದು ಹೇಳಿಕೊಳ್ಳುವ ಕಲ್ಲಡ್ಕ ಭಟ್‌ರವರು ಉದ್ವಿಗ್ನ ಪರಿಸ್ಥಿತಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕೊಲೆ ಆರೋಪಿ ಭಾಗವಹಿಸಿರುವುದು ಸಣ್ಣ ವಿಚಾರವಲ್ಲ. ಆತನಾಗಿಯೇ ಪತ್ರಿಕಾಗೋಷ್ಠಿಯಲ್ಲಿ ಕುಳಿತ್ತಿದ್ದೇ ಅಥವಾ ಆತನ್ನು ಕುಳ್ಳಿರಿಸಲಾಗಿತ್ತೇ ಎಂಬ ಬಗ್ಗೆ ಸಮಾಜಕ್ಕೆ ಸ್ಪಷ್ಟನೆಯನ್ನು ಒದಗಿಸಬೇಕಿದೆ. ಅಲ್ಲದೆ ಕೊಲೆಯ ಹಿಂದಿನ ದಿನ ಬೊಳಿಯಾರ್‌ನಲ್ಲಿ ಸ್ಥಳೀಯ ಬ್ಲಾಕ್ ಅಧ್ಯಕ್ಷರ ಕಚೇರಿಯಲ್ಲಿ ಸಭೆಯೊಂದು ನಡೆದಿರುವ ಬಗ್ಗೆ ಮಾಹಿತಿ ದೊರಕಿದೆ. ಈ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಇಲ್ಲವೆಂದು ಹೇಳಲಾಗಿದೆ. ಕಾಕತಾಳೀಯವಾಗಿ ಕೆಲವೊಂದು ಸಂಗತಿಗಳು ನಡೆಯುತ್ತವೆಯಾದರೂ, ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ಗುಪ್ತವಾಗಿ ಸಭೆ ನಡೆಸಿದ ಔಚಿತ್ಯದ ಬಗ್ಗೆ ಯೂ ತನಿಖೆ ನಡೆಸಬೇಕಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಯ ಗಮನಕ್ಕೂ ತರಲಾಗಿದೆ ಎಂದು ಸಚಿವ ಖಾದರ್ ಹೇಳಿದರು.







