ಶೋಭಾ ಕರಂದ್ಲಾಜೆಯಿಂದ ರಾಜಕೀಯಕ್ಕಾಗಿ ಸುಳ್ಳು ಆರೋಪ: ಸಚಿವ ಖಾದರ್

ಮಂಗಳೂರು, ಜೂ.25: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಅನುಮಾನಸ್ಪದ ಸಾವಿಗೆ ಸಂಬಂಧಿಸಿ ರಾಜ್ಯ ಸರಕಾರದ ಮೇಲೆ ಆರೋಪ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಇದೀಗ ಪಡಿತರ ಚೀಟಿ ಮಾಫಿಯಾ ಎಂಬ ಸುಳ್ಳು ಸುದ್ದಿ ಹರಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಕೇವಲ ರಾಜಕೀಯ ಪ್ರೇರಿತ ಎಂದು ಆಹಾರ ಸಚಿವ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅನುರಾಗ್ ತಿವಾರಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಾಡಲಾದ ಆರೋಪದ ಬಗ್ಗೆ ಲಿಖಿತವಾಗಿ ದೂರು ನೀಡುವಂತೆ ತಿಳಿಸಲಾಗಿತ್ತು. ಆದರೆ ಮೌನವಾಗಿದ್ದ ಸಂಸದೆ ಇದೀಗ ಪಡಿತರ ಚೀಟಿ ಮಾಫಿಯಾ ಎಂಬ ಆರೋಪ ಮಾಡುತ್ತಿದ್ದಾರೆ. ತಮ್ಮ ಸರಕಾರ ಅಧಿಕಾರ ವಹಿಸಿಕೊಂಡ ಬಳಿಕ ಬೋಗಸ್ ಕಾರ್ಡ್‌ಗಳನ್ನು ತಡೆಹಿಡಿಯಲಾಗಿದೆ. ಬಿಜೆಪಿ ಅವಧಿಯಲ್ಲಿ ಇಲಾಖೆಯಲ್ಲಿದ್ದ ಅಶಿಸ್ತು ಹಾಗೂ ಅವ್ಯವಹಾರವನ್ನು ಮಟ್ಟ ಹಾಕಲಾಗಿದೆ. ಹಾಗಿದ್ದರೂ ಸುಳ್ಳು ಆಪಾದನೆ ಮಾಡುವ ಬದಲು, ಇಲಾಖೆಯನ್ನು ಜನಪರವಾಗಿ ಅಭಿವೃದ್ಧಿಪಡಿಸುವಲ್ಲಿ ಯಾವುದಾದರೂ ಸಲಹೆ ಸೂಚನೆಗಳ್ನು ನೀಡಿದಲ್ಲಿ ಅದನ್ನು ಸ್ವೀಕರಿಸಲಾಗುವುದು ಎಂದರು.
ಜನಪರ ಯೋಜನೆಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮುಖ್ಯಮಂತ್ರಿ ವಿರುದ್ಧ ಟೀಕೆ ಮಾಡುವ ನೈತಿಕ ಹಕ್ಕು ಶೋಭಾ ಕರಂದ್ಲಾಜೆಯವರಿಗೆ ಇಲ್ಲ. ಅವರ ಮಾತನ್ನು ಅವರ ಪಕ್ಷದವರೇ ಕೇಳುವುದಿಲ್ಲ. ಹಾಗಿದ್ದರೂ ತಮ್ಮ ರಾಜಕೀಯ ನೆಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ‘ಕಾಗದದ ಹುಲಿ’ಯಾಗಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಖಾದರ್ ಟೀಕಿಸಿದರು.
ವಿಶ್ವನಾಥ್‌ರವರು ಕಾಂಗ್ರೆಸ್ ಪಕ್ಷದಿಂದ ಹೊರಹೋಗುತ್ತಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಚುನಾವಣೆ ಹತ್ತಿರವಾಗುತ್ತಿರುವಂತೆಯೇ ರಾಜಕೀಯದಲ್ಲಿ ಇವೆಲ್ಲಾ ಸ್ವಾಭಾವಿಕ. ಇದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಕಾಂಗ್ರೆಸ್‌ಗೆ ಇದೆ. ರಾಜ್ಯದಲ್ಲಿ ಬರಗಾಲದ ಹೊರತಾಗಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪರ ಯೋಜನೆಗಳ ಮೂಲಕ ರಾಜ್ಯವನ್ನು ಗುರುತಿಸುವಂತೆ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಶಸ್ವಿಯಾಗಿದ್ದಾರೆ. ರೈತರ ಸಾಲಮನ್ನಾ ಯೋಜನೆಯನ್ನು ರಾಜ್ಯ ಸರಕಾರ ಮಾಡಿದೆ. ಇದೀಗ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲಿ ಎಂದು ಸವಾಲೆಸೆದರು.
ಗೃಹ ಮಂತ್ರಿ ಸ್ಥಾನಕ್ಕೆ ಸೂಕ್ತರನ್ನು ಆಯ್ಕೆ ಮಾಡುವುದು ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಬಿಟ್ಟ ವಿಚಾರ ಎಂದವರು ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದ ಆಯ್ಕೆ ಕುರಿತಂತೆ ಪ್ರಶ್ನೆಗೆ ಉತ್ತರಿಸಿದ ಸಚಿವ ಖಾದರ್, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸರ್ವ ಸಮ್ಮತಿಯ ಅಭ್ಯರ್ಥಿಯೊಬ್ಬರ ಆಯ್ಕೆ ಸೂಕ್ತ ಸಮಯದಲ್ಲಿ ಆಗಲಿದೆ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯನ್ನು ಆಂತರಿಕ ಪ್ರಜಾತಾಂತ್ರಿಕ ವ್ಯವಸ್ಥೆಗೆ ಒತ್ತು ನೀಡುವ ಮೂಲಕ ನಡೆಸಿರುವ ಖ್ಯಾತಿ ಪಕ್ಷದ ರಾಷ್ಟ್ರೀಯ ಯುವ ನಾಯಕ ರಾಹುಲ್ ಗಾಂಧಿಯವರು ಮಾಡಿದ್ದಾರೆ ಎಂದವರು ಹೇಳಿದರು.
ಪೇಜಾವರ ಶ್ರೀ ನಡೆಗೆ ಸ್ವಾಗತ:
ಉಡುಪಿಯಲ್ಲಿ ಪೇಜಾವರ ಶ್ರೀಗಳು ಸೌಹಾರ್ದ ಇಫ್ತಾರ್ ಕೂಟ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂದೇಶವನ್ನು ನೀಡಿದ್ದಾರೆ. ಧಾರ್ಮಿಕ ನಾಯಕರು ಕಲ್ಲಡ್ಕದಂತಹ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಸೌಹಾರ್ದ ಇಫ್ತಾರ್‌ಗಳನ್ನು ಮಾಡುವ ಮೂಲಕ ಸೌಹಾರ್ದತೆಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.







