ಲಗೋರಿಗೆ ಪ್ರೋತ್ಸಾಹ ಅಗತ್ಯ: ಮೇಯರ್ ಕವಿತಾ ಸನಿಲ್

ಮಂಗಳೂರು, ಜೂ.25: ಲಗೋರಿಯಂತಹ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಅಗತ್ಯವಿದೆ. ತುಳುನಾಡಿನ ಗ್ರಾಮೀಣ ಕ್ರೀಡೆಗೆ ಈಗ ಹೊಸ ರೂಪಕೊಟ್ಟು ಮಾಡುತ್ತಿರುವ ಪ್ರಯತ್ನ ಮೆಚ್ಚುವಂತದ್ದು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಹೇಳಿದರು.
ಅವರು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಪಾಥ್ ವೇ ಎಂಟರ್‌ಪ್ರೈಸಸ್ ತಂಡದ ನೇತೃತ್ವದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಲಗೋರಿ ಕಪ್ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ಲಗೋರಿಯಲ್ಲಿ ಬರೀ ಪುರುಷರ ತಂಡಗಳು ಮಾತ್ರ ಕಾಣಿಸಿಕೊಂಡಿವೆ. ಮುಂದಿನ ವರ್ಷವಾದರೂ ಮಹಿಳೆಯರ ತಂಡಗಳಿಗೂ ಸಂಘಟಕರು ಆದ್ಯತೆ ನೀಡಬೇಕು. ಮಹಿಳೆಯರು ಕೂಡ ಲಗೋರಿ ಆಟದಲ್ಲಿ ಪ್ರಾವೀಣ್ಯತೆ ಇಟ್ಟುಕೊಂಡಿದ್ದಾರೆ ಎಂದರು.
ಈ ಸಂದರ್ಭ ಚಲನಚಿತ್ರ ನಟ, ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಮಾತನಾಡಿ, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನನಗೆ ಅತೀ ಹೆಚ್ಚು ಮತ ಹಾಕಿದವರು ಮಂಗಳೂರು ಸೀಮೆಯವರು. ಅವರ ಮೇಲೆ ನನಗೆ ಅತೀವ ಪ್ರೀತಿಯಿದೆ. ಬಿಗ್ ಬಾಸ್ ನಾಯಕನಾಗಿದ್ದಾಗ ಲಗೋರಿ ಆಟವಾಡಿಸಿದ್ದೆ. ಇಂತಹ ಲಗೋರಿ ಗ್ರಾಮೀಣ ಕ್ರೀಡೆ ಉಳಿದು ಈ ಕ್ರೀಡಾಕೂಟದ ಮೂಲಕ ಮುಂದಿನವರಿಗೂ ತಿಳಿಯಬೇಕು ಎಂದರು.
ಖ್ಯಾತ ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ, ಹಳ್ಳಿಯ ಕ್ರೀಡೆಗೆ ರಾಷ್ಟ್ರಮಟ್ಟದ ಖ್ಯಾತಿ ನೀಡುವ ಪ್ರಯತ್ನ ಗಮನಾರ್ಹ ಎಂದರು.
ಇದೇ ಸಂದರ್ಭ ಬಾಲ ನಾಟ್ಯ ಕಲಾವಿದೆ ಅದ್ವಿಕಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಭಂಡಾರಿ ಬಿಲ್ಡರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಲಕ್ಷ್ಮೀಶ್ ಭಂಡಾರಿ, ವೇಣು ಶರ್ಮ, ಕಾರ್ಪೊರೇಟರ್ ಸಬಿತಾ ಮಿಸ್ಕಿತ್, ಪಾತ್‌ವೇ ಇಂಟರ್‌ಪ್ರೈಸಸ್‌ನ ದೀಪಕ್ ಗಂಗೊಳ್ಳಿ, ಅಮೆಚೂರು ಲಗೋರಿ ಫೆಡರೇಶನ್‌ನ ಕಾರ್ಯದರ್ಶಿ ಸಂದೀಪ್ ಪ್ರಹ್ಲಾದ್ ಗುರಾವ್ ಉಪಸ್ಥಿತರಿದ್ದರು. ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.
ಲಗೋರಿ ಪಂದ್ಯಾಟದಲ್ಲಿ 20 ತಂಡಗಳು ಭಾಗವಹಿಸಿದ್ದವು.
ಗೋಷ್ಠಿಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಕಾಂಗ್ರೆಸ್ ಪಕ್ಷದ ಪರಿಶಿಷ್ಟ ವಿಭಾಗದ ಜಿಲ್ಲಾಧ್ಯಕ್ಷ ಪದ್ಮನಾಭ ನರಿಂಗಾನ ಮೊದಲಾದವರು ಉಪಸ್ಥಿತರಿದ್ದರು.







