ಬ್ಯಾಡ್ಮಿಂಟನ್ ಚಾಂಪಿಯನ್ ಶ್ರೀಕಾಂತ್‌ಗೆ 5 ಲಕ್ಷ ರೂ. ಬಹುಮಾನ

ಹೊಸದಿಲ್ಲಿ, ಜೂ.25: ಆಸ್ಟ್ರೇಲಿಯನ್ ಓಪನ್ ಸೂಪರ್ ಸರಣಿಯ ಫೈನಲ್‌ನಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಚೆಂಗ್ ಲಾಂಗ್‌ರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿರುವ ಬ್ಯಾಡ್ಮಿಂಟನ್ ಪಟು ಕಿಡಂಬಿ ಶ್ರೀಕಾಂತ್‌ಗೆ ಭಾರತದ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ರವಿವಾರ 5 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ.
ಕಳೆದ ರವಿವಾರ ಇಂಡೋನೇಷ್ಯಾ ಓಪನ್ ಪ್ರಶಸ್ತಿ ಜಯಿರುವ ಶ್ರೀಕಾಂತ್ ಒಂದೇ ವಾರದಲ್ಲಿ ಎರಡು ಪ್ರತಿಷ್ಠಿತ ಸೂಪರ್ ಸರಣಿ ಜಯಿಸಿರುವ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರನಾಗಿದ್ದಾರೆ.
ನಾಲ್ಕನೆ ಬಾರಿ ಸೂಪರ್ ಸರಣಿಯನ್ನು ಗೆದ್ದುಕೊಂಡಿರುವ, ಸತತ ಮೂರು ಸೂಪರ್ ಸರಣಿ ಜಯಿಸಿ ಹ್ಯಾಟ್ರಿಕ್ ಸಾಧಿಸಿರುವ ವಿಶ್ವದ ಆರನೆ ಆಟಗಾರನಾಗಿರುವ 24ರ ಹರೆಯದ ಶ್ರೀಕಾಂತ್‌ಗೆ ಬಿಎಐ ಅಧ್ಯಕ್ಷ ಹಿಮಾಂತ್ ಬಿಸ್ವಾ ನಗದು ಬಹುಮಾನ ಘೋಷಿಸಿದ್ದಾರೆ.
ಶ್ರೀಕಾಂತ್ ಈ ಹಿಂದೆ ಚೀನಾದ ಚೆಂಗ್ ವಿರುದ್ಧ ಐದು ಬಾರಿ ಮುಖಾಮುಖಿಯಾಗಿದ್ದರೂ ಗೆಲುವು ಮರೀಚಿಕೆಯಾಗಿತ್ತು. ರವಿವಾರ ತನ್ನ 6ನೆ ಪ್ರಯತ್ನದಲ್ಲಿ ಚೆಂಗ್‌ರನ್ನು 22-20, 21-16 ನೇರ ಗೇಮ್‌ಗಿಂದ ಮಣಿಸಿ ಚಾಂಪಿಯನ್ ಎನಿಸಿಕೊಂಡರು.
ಶ್ರೀಕಾಂತ್ ಸಾಧನೆಯು ನಮಗೆ ಹೆಮ್ಮೆ ತಂದಿದೆ. ಇದೊಂದು ಅಪೂರ್ವ ಸಾಧನೆ. ಅವರು ಮತ್ತೊಮ್ಮೆ ದೇಶಕ್ಕೆ ಹೆಮ್ಮೆ ತಂದಿರುವುದಲ್ಲದೆ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅವರನ್ನು ಹೊಗಳು ಶಬ್ದಗಳೇ ಸಿಗುತ್ತಿಲ್ಲ ಎಂದು ಹಿಮಾಂತ ಬಿಸ್ವಾ ತಿಳಿಸಿದರು.







