ಗುತ್ತಿಗೆಯಲ್ಲಿ ಪರಿಶಿಷ್ಟರಿಗೆ ಮೀಸಲಾತಿ; ಮಸೂದೆಗೆ ರಾಷ್ಟ್ರಪತಿ ಅಂಕಿತ: ಮಹದೇವಸ್ವಾಮಿ
ಬೆಂಗಳೂರು, ಜೂ. 25: ಸರಕಾರಿ ಕಾಮಗಾರಿಗಳಲ್ಲಿ 50ಲಕ್ಷ ರೂ.ವರೆಗೆ ಪರಿಶಿಷ್ಟ ಜಾತಿ-ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸುವ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದು, ರಾಜ್ಯ ಸರಕಾರ ತ್ವರಿತಗತಿಯಲ್ಲಿ ಕಾನೂನು ರೂಪಿಸಬೇಕೆಂದು ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಆಗ್ರಹಿಸಿದ್ದಾರೆ.
ರವಿವಾರ ಇಲ್ಲಿನ ಶಾಸಕ ಭವನದಲ್ಲಿ ಏರ್ಪಡಿಸಿದ್ದ ಸಂಘದ ಪದಾಧಿಕಾರಿಗಳ ಸಭೆ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸಿರುವ ವಿಧೇಯಕರಿಂದ ಲಕ್ಷಾಂತರ ದಲಿತ ಕುಟುಂಬಗಳಿಗೆ ಅನುಕೂಲವಾಗಲಿದೆ. ಮಾತ್ರವಲ್ಲ, ಶೋಷಿತರಿಗೆ ಆರ್ಥಿಕ ಚೈತನ್ಯ ಸಿಗಲಿದೆ ಎಂದರು.
ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ ಹಾಕಿರುವುದು ಶೀಘ್ರದಲ್ಲೆ ರಾಜ್ಯ ಸರಕಾರದ ಕೈ ಸೇರಲಿದೆ. ಆ ಬಳಿಕ ಕಾಯ್ದೆಗೆ ನೀತಿ ರೂಪಗೊಳ್ಳಲಿದೆ. ಇದರಿಂದ ಪರಿಶಿಷ್ಟ ಸಮುದಾಯದ ಗುತ್ತಿಗೆದಾರರು ಮತ್ತು ದಲಿತ ಸಮುದಾಯದ ಕೂಲಿ ಕಾರ್ಮಿಕ ಕುಟುಂಬಗಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಅಂಬೇಡ್ಕರ್, ವಾಲ್ಮೀಕಿ, ಭೋವಿ ಅಭಿವೃದ್ಧಿ ನಿಗಮಗಳಲ್ಲಿ ಪರಿಶಿಷ್ಟ ಗುತ್ತಿಗೆದಾರರಿಗೆ ಸಾಲ ಸೌಲಭ್ಯ ಕಲ್ಪಿಸಲು 500 ಕೋಟಿ ರೂ.ತುರ್ತು ನಿಧಿ ಸ್ಥಾಪಿಸಬೇಕು ಎಂದ ಅವರು, ರಾಷ್ಟ್ರೀಕೃತ ಬ್ಯಾಂಕುಗಳ ಪರಿಶಿಷ್ಟ ಗುತ್ತಿಗೆದಾರರಿಗೆ ಸರಕಾರದ ನಿರ್ದೇಶನದ ಅನ್ವಯ ಶೇ.4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಅಪ್ಪಾಜಿ ಪ್ರಕಾಶ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಓಂ ಪ್ರಕಾಶ್, ಸಂಘಟನಾ ಕಾರ್ಯದರ್ಶಿ ದೊರೆ, ಕೋಲಾರ ಜಿಲ್ಲಾಧ್ಯಕ್ಷ ಕಿರಣ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.







