ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ: ಸಿಡಿಲು ಬಡಿದು ಮಹಿಳೆಗೆ ಗಾಯ

ಉಡುಪಿ, ಜೂ.25: ಉಡುಪಿ ಜಿಲ್ಲೆಯಾದ್ಯಂತ ಕಳೆದ 48 ಗಂಟೆಗಳಲ್ಲಿ ಭಾರೀ ಮಳೆಯಾಗುತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ-ಮಳೆಗೆ ಅನೇಕ ಕಡೆಗಳಲ್ಲಿ ಮನೆಯ ಮೇಲೆ ಮರ ಬಿದ್ದು ಹಾನಿ, ಸಿಡಿಲು ಬಡಿದು ಹಾನಿ ಸಂಭವಿಸಿದ ವರದಿಗಳು ಬಂದಿವೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 11.09ಸೆ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ. ಉಡುಪಿಯಲ್ಲಿ 109.6ಮಿ.ಮೀ., ಕುಂದಾಪುರದಲ್ಲಿ 119.6ಮಿ.ಮೀ. ಹಾಗೂ ಕಾರ್ಕಳದಲ್ಲಿ 103.4ಮಿ.ಮೀ. ಮಳೆ ಸುರಿದಿದೆ.
ಇಂದು ಬೆಳಗ್ಗೆ 10:50ರ ಸುಮಾರಿಗೆ ಸಿಡಿಲು ಬಡಿದು ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಸಾವಿತ್ರಿ ಆಚಾರ್ಯ ಎಂಬವರು ಗಂಭೀರವಾಗಿ ಗಾಯಗೊಂಡು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅಪರಾಹ್ನ 1:00ಗಂಟೆಗೆ ಸುಮಾರಿಗೆ ಮಿಯಾರು ಗ್ರಾಮದ ಬೋರುಕಟ್ಟೆ ಎಂಬಲ್ಲಿ ಜಯ ಶೇರಿಗಾರ್ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು, 20,000ರೂ. ನಷ್ಟ ಸಂಭವಿಸಿದೆ ಎಂದು ಕಾರ್ಕಳ ತಾಲೂಕು ಕಚೇರಿಯಿಂದ ತಿಳಿದು ಬಂದಿದೆ.
ಕುಂದಾಪುರ ಕಸಬಾ ಗ್ರಾಮದ ಮೀನು ಮಾರುಕಟ್ಟೆಯ ಒಳಚರಂಡಿ ನೀರು ಬ್ಲಾಕ್ ಆಗಿ ಸಮೀಪದ ಸುಬ್ಬಣ್ಣ ಶೇರಿಗಾರ್ ಎಂಬವರ ಮನೆಗೆ ನೀರು ನುಗ್ಗಿದೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬೀಸಿದ ಭಾರೀ ಗಾಳಿಗೆ ಬೀಜಾಡಿ ಗ್ರಾಮದ ಅನೇಕ ಮನೆಗಳ ಹೆಂಚು, ಸಿಮೆಂಟ್ ಶೀಟು, ಪಕ್ಕಾಸಿ, ರೀಪು ಹಾರಿಹೋಗಿದ್ದು ಹಾನಿ ಸಂಭವಿಸಿದೆ. ಇದರಿಂದ ಜೆಸಿಂತಾ ಡಿಮೆಲ್ಲೊ ಎಂಬವರ ಮನೆಗೆ 10,000ರೂ., ಪ್ರತಿಮಾ ಗಾಣಿಗ ಎಂಬವರ ಮನೆಗೆ 15,000ರೂ. ಹಾಗೂ ಹಮ್ಜಾ ಸಾಹೇಬ್‌ರ ಮನೆಗೆ 15,000ರೂ.ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಕಾಪು ಸಮೀಪದ ಉಳಿಯಾರಗೋಳಿಯಲ್ಲಿ ಇಂದು ಭಾರೀ ಗಾಳಿ-ಮಳೆಗೆ ಶೋಭಾ ಪೂಜಾರ್ತಿ ಎಂಬವರ ಮನೆಯ ಹೆಂಚು ಹಾರಿಹೋಗಿದ್ದು, ಗೋಡೆ ಕುಸಿದು ಸುಮಾರು 60,000ರೂ. ನಷ್ಟ ಸಂಭವಿಸಿದೆ.
ಕಾವಡಿ ಗ್ರಾಮದ ಅಣ್ಣು ಕುಲಾಲ್ ಎಂಬವರ ಪಕ್ಕಾ ಮನೆಯ ಮೇಲೆ ಇಂದು ಹಲಸಿನ ಮರ ಬಿದ್ದು ಭಾಗಶ: ಹಾನಿಯಾಗಿದ್ದು 20,000ರೂ. ನಷ್ಟ ಸಂಭವಿಸಿದ ಬಗ್ಗೆ ಉಡುಪಿ ತಾಲೂಕು ಕಚೇರಿ ಮೂಲಗಳು ತಿಳಿಸಿವೆ.







