ಕರ್ನಾಟಕದ ಕೆಲವು ಕಡೆ ಸೋಮವಾರದಂದು (ಜೂ.26) ಪವಿತ್ರ ರಮಝಾನ್ ಹಬ್ಬ: ವಿವಿಧೆಡೆ ವಿಶೇಷ ಪ್ರಾರ್ಥನೆ

ಬೆಂಗಳೂರು, ಜೂ. 25: ರಾಜ್ಯಾದ್ಯಂತ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಜೂ.26ರ ಸೋಮವಾರದಂದು ಈದುಲ್ ಫಿತ್ರ್ ಆಚರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಚಂದ್ರದರ್ಶನ ಸಮಿತಿಯ ಸಂಚಾಲಕ ವೌಲಾನ ಸಗೀರ್ ಅಹ್ಮದ್ ತಿಳಿಸಿದ್ದಾರೆ.
ಮೈಸೂರು ರಸ್ತೆಯ ಚಾಮರಾಜಪೇಟೆ ಈದ್ಗಾ, ಮಿಲ್ಲರ್ಸ್ ರಸ್ತೆಯ ಖುದ್ದುಸ್ ಸಾಬ್ ಈದ್ಗಾ ಮೈದಾನ, ಶಿವಾಜಿನಗರದ ಚೋಟಾ ಮೈದಾನ, ಬನ್ನೇರುಘಟ್ಟ ರಸ್ತೆಯ ಬಿಲಾಲ್ ಈದ್ಗಾ ಮೈದಾನ, ಜಯನಗರ ನಾಲ್ಕನೆ ಬ್ಲಾಕಿನ ಈದ್ಗಾ ಮೈದಾನ, ನಾಗವಾರದ ಅರೇಬಿಕ್ ಕಾಲೇಜು ಮೈದಾನ ವಿಶೇಷ ಪ್ರಾರ್ಥನೆ ನಡೆಯಲಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇಲ್ಲಿನ ಅರೇಬಿಕ್ ಕಾಲೇಜು ಮೈದಾನದಲ್ಲಿ ನಾಳೆ ಬೆಳಗ್ಗೆ 9ಗಂಟೆಗೆ ನಡೆಯಲಿರುವ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅದೇ ರೀತಿ ಖುದ್ದುಸ್ ಸಾಬ್ ಈದ್ಗಾ ಮೈದಾನದಲ್ಲಿ ನಡೆಯಲಿರುವ ಪ್ರಾರ್ಥನೆಯಲ್ಲಿ ನಗರಾಭಿವೃದ್ಧಿ ಸಚಿವ ಆರ್.ರೋಷನ್‌ಬೇಗ್ ಹಾಗೂ ಜಯನಗರ ಈದ್ಗಾ ಮೈದಾನದಲ್ಲಿ ನಡೆಯಲಿರುವ ಪ್ರಾರ್ಥನೆಯಲ್ಲಿ ರಾಜ್ಯಸಭಾ ಸದಸ್ಯ ಕೆ.ರೆಹ್ಮಾನ್ ಖಾನ್ ಪಾಲ್ಗೊಳ್ಳಲಿದ್ದಾರೆ.
ಆದರೆ, ಮಂಗಳೂರು, ಉಡುಪಿ, ಭಟ್ಕಳ ಸೇರಿದಂತೆ ಕರಾವಳಿ ಭಾಗದಲ್ಲಿ ಇಂದು ಈದುಲ್ ಫಿತ್ರ್ ನ್ನು ಆಚರಿಸಲಾಗಿದೆ.







