ಚೀನಾದಲ್ಲಿ ಭೂಕುಸಿತ: ಮಾಲಕನಿಗಾಗಿ ನಾಯಿಮರಿ ಹುಡುಕಾಟ

ಬೀಜಿಂಗ್, ಜೂ.25: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ 100ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ನೈರುತ್ಯ ಚೀನಾದಲ್ಲಿ ಹಳ್ಳಿಯೊಂದು ಭೂಕುಸಿತಕ್ಕೆ ನೆಲಸಮವಾಗಿದ್ದು, ಅವಶೇಷದಲ್ಲಿ ಬಿಳಿ ನಾಯಿಮರಿಯೊಂದು ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.
ಈ ನಾಯಿಮರಿ ಒಂದೇ ಸ್ಥಳದಲ್ಲಿ ನಿಂತುಕೊಂಡು ತನ್ನ ಮಾಲಕನಿಗಾಗಿ ಹುಡುಕಾಟ ನಡೆಸುತ್ತಿದೆ. ನಾಯಿಮರಿ ತನ್ನ ಮಾಲಕನಿಗಾಗಿ ಹುಡುಕಾಡುತ್ತಿರುವ ದೃಶ್ಯ ಮನಕಲಕುವಂತಿತ್ತು. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವರು ಎಷ್ಟೇ ಪ್ರಯತ್ನ ಪಟ್ಟರೂ ನಾಯಿ ಮರಿ ಸ್ಥಳದಿಂದ ಕದಲುತ್ತಲೇ ಇಲ್ಲ.
ನಾಯಿಮರಿಯೊಂದು ತನ್ನ ಮಾಲಕನಿಗಾಗಿ ಕಾಯುತ್ತಿದ್ದು ಅವಶೇಷದಿಂದ ಬೇರೆಡೆಗೆ ತೆರಳಲು ಕೇಳುತ್ತಿಲ್ಲ. ಈ ದೃಶ್ಯ ದೇಶದ ನಾಗರಿಕರ ಹೃದಯ ಕಲುಕುವಂತಿದೆ ಎಂದು ಜಿಜಿಟಿನ್ ಇಂಗ್ಲೀಷ್ ಚಾನಲ್ ಟ್ವೀಟ್ ಮಾಡಿದೆ.
ಚೀನಾದ ಸಾಮಾಜಿಕ ಜಾಲತಾಣದಲ್ಲಿ ಈ ನಾಯಿಮರಿಯದ್ದೇ ಸುದ್ದಿ. ಎಲ್ಲರೂ ನಾಯಿಯ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಿದ್ದಾರೆ. ಓರ್ವ ವ್ಯಕ್ತಿ ನಾಯಿಯನ್ನು ದತ್ತುಪಡೆಯಲೂ ಮುಂದಾಗಿದ್ದಾರೆ.
ಕಳೆದ ವಾರ ಯೂಲಿನ್‌ನಲ್ಲಿ ನಡೆದ ಚೈನೀಸ್ ನಾಯಿ ಮಾಂಸದ ಹಬ್ಬದಲ್ಲಿ ನಾಯಿಯ ಮಾಂಸ ತಿಂದವರನ್ನು ಕೆಲವರು ಟೀಕಿಸಿದ್ದಾರೆ. ಇನ್ನು ಮುಂದೆ ನಾಯಿ ಮಾಂಸ ತಿನ್ನಬೇಡಿ. ಈ ನಾಯಿಮರಿ ತನ್ನ ಮಾಲಕನನ್ನು ರಕ್ಷಿಸಲು ತನ್ನ ಮನೆಯಲ್ಲಿ ಉಳಿದುಕೊಂಡಿದೆ ಎಂದು ಇನ್ನೋರ್ವ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.







