ಜೆಡಿಎಸ್‌ನಿಂದ ಮೀರಾ ಕುಮಾರ್‌ಗೆ ಬೆಂಬಲ: ಕುಮಾರ ಸ್ವಾಮಿ

ಉಡುಪಿ, ಜೂ.25: ಜಾತ್ಯತೀತ ಜನತಾದಳ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಪತ್ನಿ, ಮಗನೊಂದಿಗೆ ಇಂದು ಸಂಜೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ಇಂದು ಬೆಳಗ್ಗೆ ತನಗೆ ಹಾಗೂ ತಂದೆ ಎಚ್.ಡಿ.ದೇವೇಗೌಡರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ಮೀರಾ ಕುಮಾರ್ ಅವರಿಗೆ ಬೆಂಬಲವನ್ನು ಯಾಚಿಸಿದ್ದು, 17 ಪಕ್ಷಗಳ ಅಭ್ಯರ್ಥಿಯಾಗಿರುವ ಅವರಿಗೆ ಪಕ್ಷದ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದರು.
ಮೀರಾ ಕುಮಾರ್ ಅವರು ಹಲವು ಹುದ್ದೆಗಳಲ್ಲಿ ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದು, ಅಲ್ಲದೇ ಬಾಬು ಜಗಜೀವನ್‌ರಾಂ ಅವರ ಮಗಳಾಗಿ ಅವರ ಕೊಡುಗೆಯ ಹಿನ್ನೆಲೆಯಲ್ಲಿ ಹಾಗೂ 17 ಪಕ್ಷಗಳ ಒಮ್ಮತದ ಅಭ್ಯರ್ಥಿ ಯಾಗಿರುವ ಅವರಿಗೆ ಬೆಂಬಲ ನೀಡಲಿದ್ದೇವೆ ಎಂದರು.
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ರೈತರ ಪೇಟೆಂಟ್ ಪಡೆಯಲು ಸಾದ್ಯವಿಲ್ಲ. ಅವರೊಬ್ಬ ಓತ್ಲ ರೈತ. ನಾವೇ ನಿಜವಾದ ರೈತರು ಎಂದರು. ರಾಜಕಾರಣಕ್ಕೆ ಬರುವವರೆಗೆ (1997) ನಾನೂ ರೈತನಾಗಿ ಕೃಷಿ ಮಾಡಿದ್ದೆ. ಶಾಲಾ ಕಾಲೇಜು ರಜಾ ದಿನಗಳಲ್ಲಿ ನಾನು ತಿಪ್ಪೆಯಿಂದ ಗೊಬ್ಬರ ಎತ್ತಿದ್ದೇನೆ, ಗಾಡಿ ಓಡಿಸಿದ್ದೇನೆ ಎಂದರು.
ಸಿದ್ಧರಾಮಯ್ಯ ರಾಜ್ಯದ ರೈತರಿಗೆ ಕೊಟ್ಟ ಬಳವಳಿ ಏನು ಎಂಬ ಇತಿಹಾಸ ವನ್ನು ಅವರ ಕಾಲದಲ್ಲಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಹೇಳುತ್ತದೆ. ಇನ್ನು ಅವರು ಮಾಡಿದ 50,000ರೂ. ಸಾಲಮನ್ನಾದ ಹಣೆಬರಹ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ರಾಷ್ಟ್ರಪತಿಗಳು ಇತ್ತೀಚೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದಾಗ ಬಾರದ ಸಿದ್ಧರಾಮಯ್ಯರ ನಡೆಯನ್ನು ತೀವ್ರವಾಗಿ ಟೀಕಿಸಿದ ಕುಮಾರಸ್ವಾಮಿ, ಪೇಜಾವರ ಶ್ರೀಗಳು ಖುದ್ದಾಗಿ ನೀಡಿದ ಆಹ್ವಾನವನ್ನು ತಿರಸ್ಕರಿಸಿ ಉಡುಪಿಗೆ ಬಾರದಿರುವುದನ್ನು ಉದ್ದಟತನವೆಂದು ಬಣ್ಣಿಸಿದ್ದಾರೆ.
ಇದರಿಂದ ಮಠಕ್ಕಾಗಲೀ, ಪೇಜಾವರಶ್ರೀಗಳಿಗಾಗಲೀ ನಷ್ಟವಿಲ್ಲ. ನಷ್ಟವಿರುವುದು ಸಿದ್ಧರಾಮಯ್ಯರಿಗೆ ಹಾಗೂ ಪಕ್ಷಕ್ಕೆ. ಸಿಎಂರ ಈ ಉದ್ಧಟತನ ದಿಂದಲೇ ರಾಜ್ಯದಲ್ಲಿ ಇಂಥ ಕೆಟ್ಟ ಸ್ಥಿತಿ ಇದೆ ಎಂದವರು ಹೇಳಿದರು. ಈ ಬಾರಿಯೂ ರಾಜ್ಯದಲ್ಲಿ ನಿರೀಕ್ಷಿತ ಮಳೆ ಬಾರದಿರಲು ಸಿದ್ಧರಾಮಯ್ಯರ ಸಣ್ಣತನ, ದ್ವೇಷದ ಮನೋಭಾವವೇ ಕಾರಣ ಎಂದಿದ್ದಾರೆ. ರಾಜ್ಯದ ಜನತೆ ಇದಕ್ಕಿಂತ ಉತ್ತಮ ಬದುಕು ಕಾಣಲು ಸಾಧ್ಯವಿಲ್ಲ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಬೇಕಿಲ್ಲ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.







