ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿ: ಮೀರಾ ಕುಮಾರ್

ಹೊಸದಿಲ್ಲಿ, ಜೂ.25: ರಾಷ್ಟ್ರಪತಿ ಚುನಾವಣೆ ಮತದಾನದ ವೇಳೆ ಜನಪ್ರತಿನಿಧಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿ ಎಂದು ಹದಿನೇಳು ವಿರೋಧ ಪಕ್ಷಗಳ ಸಂಯುಕ್ತ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮೀರಾ ಕುಮಾರ್ ಕರೆ ನೀಡಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಕ್ಕು ಹೊಂದಿರುವ ಜನಪ್ರತಿನಿಧಿಗಳಿಗೆ ಬರೆದ ಪತ್ರದಲ್ಲಿ, "ಜುಲೈ 17ರಂದು ಮತದಾನ ಮಾಡುವ ಮೂಲಕ ಇತಿಹಾಸ ಸೃಷ್ಟಿಸುವ ಅಪೂರ್ವ ಅವಕಾಶ ಒದಗಿ ಬಂದಿದೆ" ಎಂದು ಹೇಳಿದ್ದಾರೆ.
"ಆತ್ಮಸಾಕ್ಷಿಯ ಕರೆಗೆ ಓಗೊಡುವ ಮೂಲಕ ದೇಶದ ಭವಿಷ್ಯವನ್ನು ನಿರ್ಧರಿಸಬೇಕಾದ ಕಾಲ ಬಂದಿದೆ. ಎಲ್ಲರೂ ಒಗ್ಗಟ್ಟಾಗಿ ನಿಂತು ಪವಿತ್ರವಾದ ಚುನಾವಣಾ ಪ್ರಕ್ರಿಯೆಗೆ ಬದ್ಧತೆ ತೋರೋಣ" ಎಂದು ಕೋರಿದ್ದಾರೆ.
ಇತ್ತೀಚಿನ ಕೆಲ ದಿನಗಳಿಂದ ನಡೆಯುತ್ತಿರುವ ಘಟನಾವಳಿಗಳು ಇತಿಹಾಸದಲ್ಲಿ ದಾಖಲಾಗುವಂಥದ್ದು ಎಂದು ಮೀರಾ ಬಣ್ಣಿಸಿದ್ದಾರೆ. ಆಡಳಿತಾರೂಢ ಎನ್‌ಡಿಎ ಹಾಗೂ ವಿರೋಧಿ ಬಣ ಕೂಡಾ ದಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವುದನ್ನು ಪರೋಕ್ಷವಾಗಿ ಅವರು ಉಲ್ಲೇಖಿಸಿದ್ದಾರೆ.
"ನನ್ನ ಸಾರ್ವಜನಿಕ ಜೀವನದಲ್ಲಿ, ಪಕ್ಷಬೇಧ ಮರೆತು ದೇಶದ ಹಿಂದಿನ ನಾಯಕರು ಹಾಕಿಕೊಟ್ಟ ಹಾದಿಯನ್ನು ಮುಂದುವರಿಸುತ್ತಾ ಬಂದಿದ್ದೇನೆ. ಎಲ್ಲ ಭಿನ್ನತೆಗಳ ನಡುವೆಯೂ ಸಾಮಾಜಿಕ ನ್ಯಾಯ ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯ ತತ್ವವನ್ನು ಉಳಿಸಿಕೊಳ್ಳಬೇಕಾಗಿದೆ" ಎಂದು ಹೇಳಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ಜಾತಿಪದ್ಧತಿ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದನ್ನೂ ಮೀರಾ ಕುಮಾರ್ ಒತ್ತಿ ಹೇಳಿದ್ದಾರೆ.







