ವಿಂಡೀಸ್ ವಿರುದ್ಧ ಭಾರತಕ್ಕೆ ಜಯ

ಪೋರ್ಟ್ ಆಫ್ ಸ್ಪೇನ್, ಜೂ. 26: ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರೆಹಾನೆ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ಎರಡನೆ ಏಕದಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು 105 ರನ್ನುಗಳ ಭಾರಿ ಅಂತರದಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕ್ವೀನ್ಸ್ ಪಾರ್ಕ್ ಓವೆಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಾಧಿಸಿದ ಈ ಜಯ ಕೆರೀಬಿಯನ್ ನಾಡಿನಲ್ಲಿ ದೊರೆತ ಅತಿದೊಡ್ಡ ಅಂತರದ ಜಯ ಎಂದು ಇತಿಹಾಸದಲ್ಲಿ ದಾಖಲಾಯಿತು.
ಮೊದಲ ಪಂದ್ಯ ಮಳೆಯಿಂದ ಕೊಚ್ಚಿ ಹೋಗಿತ್ತು. ರವಿವಾರ ಕೂಡಾ ದಟ್ಟಮೋಡದ ನಡುವೆಯೇ ಪಂದ್ಯ ನಡೆಯಿತು. ಭಾರತದ ಆರಂಭಿಕ ಜೋಡಿ ಶತಕದ ಜತೆಯಾಟ ಮೂಲಕ ಭರ್ಜರಿ ಆರಂಭ ಒದಗಿಸಿತು. ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ 43 ಓವರ್‌ಗಳಿಗೆ ಇಳಿದ ಪಂದ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ನುಗಳ ಭರ್ಜರಿ ಮೊತ್ತ ಪೇರಿಸಿತು. ನಾಯಕ ವಿರಾಟ್ ಕೊಹ್ಲಿ 87 ರನ್ ಸಿಡಿಸಿದರೆ, ಅಜಿಂಕ್ಯಾ ರೆಹಾನೆ 103 ರನ್ ಗಳಿಸಿ, ಭಾರತದ ಭರ್ಜರಿ ಮೊತ್ತಕ್ಕೆ ನೆರವಾದರು.
ಇತ್ತೀಚೆಗೆ ಟೆಸ್ಟ್ ಮಾನ್ಯತೆ ಪಡೆದ ಅಪ್ಘಾನಿಸ್ತಾನದ ಜತೆಗಿನ ಸರಣಿಯನ್ನು 1-1ರಲ್ಲಿ ಸಮಬಲ ಮಾಡಿಕೊಂಡಿದ್ದ ವಿಂಡೀಸ್ ತಂಡ ಭಾರತಕ್ಕೆ ಯಾವುದೇ ಹಂತದಲ್ಲಿ ಸವಾಲು ಒಡ್ಡಲಿಲ್ಲ. ರೋಹಿತ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಶಿಖರ್ ಧವನ್ ಹಾಗೂ ಅಜಿಂಕ್ಯಾ ರೆಹಾನೆ ಕೇವಲ 18.2 ಓವರ್‌ಗಳಲ್ಲಿ 114 ರನ್ ಸೂರೆಗೊಂಡರು. 34ನೆ ಓವರ್‌ನಲ್ಲಿ ತಮ್ಮ ವೃತ್ತಿಜೀವನದ 3ನೆ ಶತಕ ಪೂರೈಸಿದ ರಹಾನೆ ದೊಡ್ಡ ಹೊಡೆತಕ್ಕೆ ಹೋಗಿ ವಿಕೆಟ್ ಒಪ್ಪಿಸಿದರು. ಇದಕ್ಕೂ ಮುನ್ನ ನಾಯಕ ಕೊಹ್ಲಿ ಜತೆಗೆ 96 ರನ್‌ಗಳ ಜತೆಯಾಟದಲ್ಲಿ ಪಾಲ್ಗೊಂಡಿದ್ದರು. ಯುವರಾಜ್ ಸಿಂಗ್ ಹಾಗೂ ಧೋನಿಯವರಿಂದ ಬಡ್ತಿ ಪಡೆದ ಹಾರ್ದಿಕ್ ಪಾಂಡ್ಯ ಮಾತ್ರ ನಿರಾಸೆ ಮಾಡಿದರು.
ವಿಂಡೀಸ್ ತಂಡದಲ್ಲಿ ಶಾಯ್ ಹೋಪ್ ಮಾತ್ರ 88 ಎಸೆತಗಳಲ್ಲಿ 81 ರನ್ ಗಳಿಸಿ ಗಮನ ಸೆಳೆದರು. ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 205 ರನ್ನುಗಳೊಂದಿಗೆ ವಿಂಡೀಸ್ ಇನಿಂಗ್ಸ್ ಅಂತ್ಯವಾಯಿತು.







