ದೆಹಲಿಗೆ ಶೀಘ್ರ ಚಾಲಕ ರಹಿತ ಮೆಟ್ರೊ

ಹೊಸದಿಲ್ಲಿ, ಜೂ. 26: ದೆಹಲಿಯ ಜನತೆ ಮುಂದಿನ ಮೂರು ತಿಂಗಳಲ್ಲಿ ಚಾಲಕ ರಹಿತ ಮೆಟ್ರೊ ರೈಲಿನಲ್ಲಿ ಸಂಚರಿಸುವ ಅವಕಾಶ ಪಡೆಯಲಿದ್ದಾರೆ. ಇದು ದೇಶದ ಮೊಟ್ಟಮೊದಲ ಚಾಲಕ ರಹಿತ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಜಾನಕ್‌ಪುರ ಪಶ್ಚಿಮದಿಂದ ಬೊಟಾನಿಕಲ್ ಗಾರ್ಡನ್ ವರೆಗಿನ ಮೆಜೆಂಟಾ ಲೈನ್ ಮಾರ್ಗದಲ್ಲಿ ಅಕ್ಟೋಬರ್‌ನಿಂದ ಚಾಲಕ ರಹಿತ ಮೆಟ್ರೊ ಸೇವೆ ಆರಂಭಿಸಲಾಗುತ್ತದೆ.
3ನೆ ಹಂತದ ಮೆಟ್ರೊ ಯೋಜನೆಯ ಭಾಗವಾದ ಕಲ್ಕಾಜಿ ಮತ್ತು ಬೊಟಾನಿಕಲ್ ಗಾರ್ಡನ್ ನಡುವಿನ 13 ಕಿಲೋಮೀಟರ್ ಉದ್ದದ ಮಾರ್ಗ ಹಾಗೂ ಜಾನಕ್‌ಪುರಿ ಮತ್ತು ಐಜಿಐ ವಿಮಾನ ನಿಲ್ದಾಣ ಮೆಟ್ರೊ ಸ್ಟೇಷನ್ ನಡುವಿನ 10 ಕಿಲೋಮೀಟರ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಈ ಮಾರ್ಗದಲ್ಲಿ ಈಗಾಗಲೇ ಸುರಕ್ಷತೆ ಪರೀಕ್ಷೆ ನಡೆದಿದ್ದು, ಸಿಗ್ನಲಿಂಗ್ ವ್ಯವಸ್ಥೆಯನ್ನು ಈಗಾಗಲೇ ಸುರಕ್ಷಾ ವಿಭಾಗದ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ. ಅವರಿಂದ ಪ್ರಮಾಣಪತ್ರ ಬಂದ ತಕ್ಷಣ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.
ಮುಂದಿನ ಮಾರ್ಚ್ ವೇಳೆಗೆ ಮೂರನೇ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಡಿಎಂಆರ್‌ಸಿ ಪ್ರಕಟಿಸಿದೆ. ಆಗ ಮಜ್ಲೀಸ್ ಪಾರ್ಕ್ ಹಾಗೂ ಶಿವವಿಹಾರ ನಡುವಿನ ಮಾರ್ಗವೂ ಸಂಚಾರಕ್ಕೆ ಮುಕ್ತವಾಗಲಿದೆ.





